ಗ್ರಾಮೀಣ ಪ್ರದೇಶಗಳಲ್ಲಿಯೇ ದೇಶದ ಉನ್ನತಿ ಹಾಗೂ ಅಭಿವೃದ್ಧಿ ಅಡಗಿದೆ ಎಂದು ಮಹಾತ್ಮ ಗಾಂಧಿಜೀ ಸಾರಿದ್ದರು – ಬೈರತಿ ಬಸವರಾಜ್

IMG-20211002-WA0068

ದಾವಣಗೆರೆ: ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಸತ್ಯ, ಅಹಿಂಸೆ, ಉಪವಾಸ ಚಳುವಳಿಗಳೇ ಗಾಂಧೀಜಿಯವರಿಗೆ ಪ್ರಬಲ ಅಸ್ತ್ರವಾಗಿದ್ದವು. ಸ್ವದೇಶಿ ವಸ್ತುಗಳ ಬಳಕೆಯಿಂದಲೇ ದೇಶ ಸ್ವಾವಲಂಬಿಯಾಗಲು ಸಾಧ್ಯ ಎಂದು ಪ್ರತಿಪಾದಿಸಿದ್ದ ಗಾಂಧೀಜಿಯವರು, ಗ್ರಾಮೀಣ ಪ್ರದೇಶಗಳಲ್ಲಿಯೇ ದೇಶದ ಉನ್ನತಿ ಹಾಗೂ ಅಭಿವೃದ್ಧಿ ಅಡಗಿದೆ ಎಂದು ಸಾರಿದ್ದರು ಎಂದು ನಗರಾಬಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ ಹೇಳಿದರು.

ನಗರದ ಶ್ರೀರಾಮನಗರ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಗಾಂಧಿ ಭವನದಲ್ಲಿ ಶನಿವಾರದಂದು ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದಾವಣಗೆರೆ ಜಿಲ್ಲೆಗೂ ಗಾಂಧೀಜಿಯವರ ನಂಟಿದ್ದು, 1934 ರಲ್ಲಿ ದಾವಣಗೆರೆಗೆ ಗಾಂಧೀಜಿಯವರು ಬಂದಿದ್ದು, ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸಿದ್ದು, ಕಾಸಲ್ ಶ್ರೀನಿವಾಸ ಶೆಟ್ಟಿ ಮತ್ತು ಚನ್ನಗಿರಿಯ ರಂಗಪ್ಪ ಅವರ ನೆರವಿನಿಂದ ಹರಿಜನ ವಿದ್ಯಾರ್ಥಿಗಳಿಗಾಗಿ ಇಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಕಾರಣೀಭೂತರಾದ ಬಗ್ಗೆ ಇದೇ ಸಂದರ್ಭದಲ್ಲಿ ಸ್ಮರಿಸಿದ ಸಚಿವ ಬಿ.ಎ. ಬಸವರಾಜ್ ಅವರು, ಗಾಂಧೀಜಿಯವರ ತತ್ವ ಸಿದ್ಧಾಂತಗಳು, ಹಾಗೂ ಅವರ ಜೀವನ ಎಂದೆಂದಿಗೂ ಆದರ್ಶಮಯ ಎಂದು ಬಣ್ಣಿಸಿದರು.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿಯನ್ನೂ ಕೂಡ ಅತ್ಯಂತ ಹೆಮ್ಮೆಯಿಂದ ಇಡೀ ದೇಶ ಇಂದು ಆಚರಿಸುತ್ತಿದೆ. ದೇಶದ ಅಭಿವೃದ್ಧಿಗೆ ಶಾಸ್ತ್ರೀಜಿ ಅವರ ಕೊಡುಗೆ ಅಪಾರವಾಗಿದ್ದು, ಅವರು ದೇಶಕ್ಕೆ ನೀಡಿದ ‘ಜೈ ಜವಾನ್, ಜೈ ಕಿಸಾನ್’ ಕರೆ ದೇಶವನ್ನು ಸ್ವಾವಲಂಬಿಯಾಗಿಸಲು ಪ್ರೇರಣೆಯಾಯಿತು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದ ಶಾಸ್ತ್ರೀಜಿಯವರು, ಅಸಹಕಾರ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಸರಳತೆ ಹಾಗೂ ಸಜ್ಜನಿಕೆ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ. ಇಂತಹ ಮಹಾನ್ ನಾಯಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದು, ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಸಚಿವ ಬಿ.ಎ. ಬಸವರಾಜ್ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ, ತ್ಯಾಗ ಬಲಿದಾನದಿಂದಲೇ ನಮ್ಮ ದೇಶಕ್ಕೆ ಸ್ವಾತಂತ್ರö್ಯ ದೊರೆಯಿತು. ದೇಶ ಸಂಕಷ್ಟದಲ್ಲಿದ್ದಾಗ ಪ್ರತಿ ಸೋಮವಾರ ಊಟವನ್ನು ತ್ಯಜಿಸುವ ಮೂಲಕ ಬಡವರಿಗೂ ಆಹಾರ ದೊರೆಯುವಂತೆ ಮಾಡೋಣ ಎಂದು ಗಾಂಧೀಜಿ ನೀಡಿದ್ದ ಕರೆಯನ್ನು ಶಾಸಕರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಲಾಲ್ ಬಹದ್ದೂರ್ ಶಾಸ್ತ್ರೀಯವರು ಈ ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಮಂತ್ರಿಯಾಗಿದ್ದರು ಎಂದು ಶಾಸಕರು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಮಹಾನಗರಪಾಲಿಕೆ ಉಪಮೇಯರ್ ಶಿಲ್ಪಾ ಜಯಪ್ರಕಾಶ್, ಧೂಡಾ ಆಯುಕ್ತ ಕುಮಾರಸ್ವಾಮಿ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!