ಶರಣಬಳ್ಳಿ, ಜಂಗಮಬಳ್ಳಿ, ಹಬ್ಬಿಸಿದ ಜಯದೇವ ಶ್ರೀಗಳು ಆಕಾಶದಲ್ಲಿ ಮಿಂಚುವ ಬಳ್ಳಿಯಂತೆ – ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು

IMG-20211004-WA0071
ದಾವಣಗೆರೆ: ಶರಣಬಳ್ಳಿ, ಜಂಗಮಬಳ್ಳಿಯನ್ನು ಹಬ್ಬಿಸಿರುವ ಜಯದೇವ ಶ್ರೀಗಳು ಆಕಾಶದಲ್ಲಿ ಮಿಂಚುವ ಬಳ್ಳಿಯಂತೆ. ಅವರು ಮಾಡಿರುವ ಸತ್ಕಾರ್ಯಗಳು, ಮಹತ್ ಕಾರ್ಯಗಳಿಂದಾಗಿ ಅವರ ಹೆಸರು ಎಂದೆಂದಿಗೂ ಅಮರವಾಗಿರುತ್ತದೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಶ್ಲಾಘಿಸಿದರು. ‌
ಚಿತ್ರದುರ್ಗ ಮುರುಘಾಮಠದ ಶಾಖೆ, ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ ಹಾಗೂ ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಇವರ ೬೫ ನೇ ವರ್ಷದ ಸ್ಮರಣೋತ್ಸವದ ಅಂತಿಮ ದಿನವಾದ ಸೋಮವಾರ ಇಲ್ಲಿನ ಶಿವಯೋಗಾಶ್ರಮದಲ್ಲಿ ಶ್ರೀ ಜಯದೇವಲೀಲೆ ಪ್ರವಚನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವಿಭೂತಿ ಧರಿಸಿದವರೆಲ್ಲಾ ವಿಭೂತಿ ಪರುಷರಾಗಿರುವುದಿಲ್ಲ. ಯಾರು ಅಸಹಾಯಕರ, ದುಃಖಿತರ ಮೇಲೆ ಅಂತಃಕರಣ ತೋರಿಸುತ್ತಾರೋ ಅವರೇ ನಿಜವಾದ ವಿಭೂತಿ ಪುರುಷರು. ಬಸವಣ್ಣನವರು ಮತ್ತು ಜಯದೇವ ಶ್ರೀಗಳು ವಿಭೂತಿ ಪುರುಷರಾಗಿದ್ದರು ಎಂದು ಸ್ಮರಿಸಿದರು.
ಸಂದರ್ಭಕ್ಕೆ ತಕ್ಕಂತೆ ನಾವು ಕಲಿಯುತ್ತಾ, ತಿಳಿಯುತ್ತಾ, ಬೆಳೆಯುತ್ತಾ ಹೋಗಬೇಕು ಈ ರೀತಿಯ ತಾತ್ವಿಕಧಾರೆ, ಚಿಂತನೆ ಜಯದೇವಶ್ರೀಗಳಿಗೆ ಸಿದ್ದಿಸಿತ್ತು. ಚಲನಶೀಲ ವ್ಯಕ್ತಿತ್ವದವರಾಗಿದ್ದು, ಕುಗ್ರಾಮಗಳನ್ನು ಸುಗ್ರಾಮಗಳಾಗಿ ಮಾಡಿರುವ ಕೀರ್ತಿ ಅವರಿ ಸಲ್ಲುತ್ತದೆ. ಶೂನ್ಯದಿಂದ ಬಂದು ಜನಸಾಮಾನ್ಯರಂತಿದ್ದ ಶ್ರೀಗಳು ಅವರು ಮಾಡಿರುವ ಮಹಾತ್ ಕಾರ್ಯಗಳಿಂದಾಗಿ ಅವರು ಮಹಾಸ್ವಾಮಿಗಳಾದರು. ಈಗ ನಮಗೆಲ್ಲಾ ಬೇಕಿರುವುದು ಸಹ ಮಹಾತ್‌ಕಾರ್ಯ ಮಾಡುವ ಮಹಾ ಶರಣರು, ಮಹಾ ಯೋಗಿಗಳು, ಮಹಾ ಮಾನವತಾವಾದಿಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮ್ಮುಖ ವಹಿಸಿದ್ದ ವಿರಕ್ತಮಠದ ಬಸವಪ್ರಭುಶ್ರೀಗಳು ಮಾತನಾಡಿ, ಪ್ರಪಂಚ ಶುರುವಾತಿನಿಂದ ಇದುವರೆಗೂ ಸಾಕಷ್ಟು ಜನರು ಬಂದು ಹೋಗಿದ್ದಾರೆ. ಅವರಲ್ಲಿ ಸಮಾಜಕ್ಕೆ ಉತ್ತಮ ಕಾರ್ಯದ ಮೂಲಕ ಕೊಡುಗೆ ನೀಡಿದವರ ಹೆಸರು ಮಾತ್ರ ಇಂದಿಗೂ ಅಜರಾಮರವಾಗಿ ಉಳಿದಿದೆ. ಬಸವ, ಬುದ್ಧ, ಏಸು, ಮಹಾವೀರ ಅಂತರಹ ಮಹಾನ್ ವ್ಯಕ್ತಿಗಳು ಎಂದೆಂದಿಗೂ ನಮ್ಮ ನಡುವೆ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ ಎಂದರು.
ಇವರಲ್ಲಿ ಜಯದೇವ ಶ್ರೀಗಳು ಸಹ ಒಬ್ಬರು. ೧೫೦ ವರ್ಷಗಳಾದರೂ ಸಹ ಅವರ ಹೆಸರು ಇಂದಿಗೂ ಕೇಳುತ್ತಿದೆ ಎಂದರೆ ಅದಕ್ಕೆ ಅವರು ಮಾಡಿರುವ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಕಾರಣ. ಅವರು ಮಾಡಿರುವ ಮಹಾತ್ ಕಾರ್ಯಗಳು ಲೆಕ್ಕಕ್ಕೆ ಸಿಗದಷ್ಟಿವೆ. ಉಚಿತ ಪ್ರಸಾದ ನಿಲಯ, ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಗುರುಮಠಕಲ್‌ನ ಶಾಂತವೀರಸ್ವಾಮೀಜಿ, ಚನ್ನಗಿರಿಯ ಜಯಬಸವಚಂದ್ರ ಸ್ವಾಮೀಜಿ, ರಾಣೇಬೆನ್ನೂರಿನ ಗುರುಬಸವ ಸ್ವಾಮೀಜಿ, ಹಾವೇರಿಯ ಬಸವಶಾಂತಲಿಂಗ ಸ್ವಾಮೀಜಿ ಸೇರಿದಂತೆ ಚಳ್ಳಕೆರೆ, ಕುಂಬಾರ ಪೀಠ, ಗುಬ್ಬಿ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು, ಓಂಕಾರಪ್ಪ ಸ್ವಾಗತಿಸಿದರು, ಮಹಾಂತೇಶ ಶಾಸ್ತ್ರೀ ಪ್ರವಚನ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!