Dasara : ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಸರಳ ದಸರಾ ಮಹೋತ್ಸವ : ಅಕ್ಟೋಬರ್ 7 ರಿಂದ 16 ರವರಗೆ ವಿಶೇಷ ಕಾರ್ಯಕ್ರಮ

ದಾವಣಗೆರೆ: ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಇದೇ ಅ.7 ರಂದು ಚಾಲನೆ ನೀಡುವುದಾಗಿ ದೇವಸ್ಥಾನ ಟ್ರಸ್ಟ್ಮ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದರು.
ದೇವಸ್ಥಾನದ ಪ್ರಸಾದ ನಿಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲದಿನವಾದ ಗುರುವಾರ ದೇವಿಯ ಘಟಸ್ಥಾಪನೆ ಮಾಡಲಾಗುವುದು. ಅ.೭ರಿಂದ ೧೬ರವರೆಗೆ ವಿಶೇಷ ಪೂಜೆ, ಅಭಿಷೇಕ ಮತ್ತು ಪ್ರತಿದಿನ ರಾತ್ರಿ ೮ ಗಂಟೆಗೆ ಹಾವೇರಿ ಜಿಲ್ಲೆಯವರಾದ ಹರಿಕಥಾ ವಿದ್ವಾನ್ ರೇವಣ ಸಿದ್ದಯ್ಯ ಮತ್ತವರ ಸಂಗಡಿಗರಿಂದ ಶ್ರೀದೇವಿಯ ಪುರಾಣ ಪ್ರವಚನವು ನಡೆಯಲಿದೆ ಎಂದು ಹೇಳಿದರು.
ಪ್ರತಿದಿನವೂ ದೇವಿಗೆ ವಿವಿಧ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುವುದು. ಅ.೧೪ರಂದು ಇರುವ ಆಯುಧ ಪೂಜೆಯಂದು ಬೆಳಿಗ್ಗೆ ೧೦:೩೦ ಕ್ಕೆ ಕುಂಬಾಭಿಷೇಕ ಇರುತ್ತದೆ. ಅ.೧೫ ರಂದು ಗಜಲಕ್ಷ್ಮೀ ಅಲಂಕಾರದಿಂದ ದೇವಿಗೆ ಅಲಂಕರಿಸಿ, ವಿಜಯದಶಮಿ ಮತ್ತು ಬನ್ನಿಮುಡಿಯುವ ಕಾರ್ಯಕ್ರಮ ಇರಲಿದೆ. ಅ.೧೬ರಂದು ಕಳಸದ ಪೂಜೆ ಮತ್ತು ನಂತರ ಟ್ರಸ್ಟ್ನ ಗೌರವಾಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಸಮ್ಮುಖದಲ್ಲಿ ಮತ್ತು ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯ ಶ್ರೀಗಳು ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಅ.೧೬ ರಂದು ನಡೆಯುವ ಸಾಮೂಹಿಕ ಮಹೋತ್ಸವಕ್ಕೆ ವಿವಾಹ ಆಸಕ್ತರು ಅ.೧೨ರೊಳಗಾಗಿ ಹೆಸರು ನೊಂದಾಯಿಸತಕ್ಕದ್ದು, ಅಗತ್ಯ ದಾಖಲೆಗಳೊಂದಿಗೆ ಕಮಿಟಿಗೆ ಬಂದು ಅರ್ಜಿಸಲ್ಲಿಸುವಂತೆ ತಿಳಿಸಿದರು.
ದಾಸೋಹ ಶುರು: ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ನಡೆಯುವ ದಾಸೋಹವು ಕರೋನಾ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿತ್ತು. ಈಗ ಇದೇ ಅ.೧ರಿಂದ ಮತ್ತೆ ಪ್ರಾರಂಭಿಸಲಾಗಿದೆ ಎಂದು ಧರ್ಮದರ್ಶಿಗಳು ಹೇಳಿದರು.