ಉತ್ತರ ಪ್ರದೇಶ ಪ್ರತಿಭಟನಾನಿರತ ರೈತರ ಹತ್ಯೆ : ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಸಂಘಟನೆಯಿಂದ ಪ್ರತಿಭಟನೆ

ದಾವಣಗೆರೆ: ಉತ್ತರ ಪ್ರದೇಶ ಲಿಖಿಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಬೆಂಗಾವಲು ವಾಹನ ಹರಿಸಿ ನಡೆಸಿರುವ ಹತ್ಯೆ ಖಂಡಿಸಿ, ಮತ್ತು ಮೃತರಾದ ಮೂವರು ರೈತರಿಗೆ ತಲಾ ೧ ಕೋಟಿ ರೂ., ಪರಿಹಾರ, ಅವರ ಕುಟುಂಬದವರಿಗೆ ಸರ್ಕಾರಿ ನೌಕರಿ ಹಾಗೂ ಗಾಯಗೊಂಡ ರೈತರಿಗೆ ೫೦ ಲಕ್ಷ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯಿಸಿ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಸಂಘಟನೆಯಿಂದ ಮಂಗಳವಾರ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಇದೇ ವೇಳೆ ಮಾತನಾಡಿ, ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ವಾಹನ ಹರಿದು ಮೂವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ರೈತರ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಘಟನೆಯಲ್ಲಿ ಮೂವರು ರೈತರು ಮೃತಪಟ್ಟಿದ್ದು, ೮ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾದ ರೈತ ನಾಯಕರಿಗೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರತೆನಿ ಬಹಿರಂಗ ಬೆದರಿಕೆ ಹಾಕಿರುವುದರ ವಿರುದ್ಧ ರೈತರು ಉತ್ತರ ಪ್ರದೇಶದ ಲಿಖಿಂಪುರ ಖೇರಿಯ ಹೆಲಿಪ್ಯಾಡ್‌ಅನ್ನು ಆಕ್ರಮಿಸಿಕೊಂಡಿದ್ದರು. ಕಪ್ಪು ಬಾವುಟದೊಂದಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಚಿವ ಅಜಯ ಮಿಶ್ರ ತೆ ಬೆಂಗಾವಲು ಪಡೆ ಕಾರು ಹರಿಸಿದ್ದಾರೆ. ಘಟನೆಯಲ್ಲಿ ಮೂವರು ರೈತರು ಸಾವನ್ನಪ್ಪಿದ್ದಾರೆ. ಜೊತೆಗೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್.ಕೆ.ಎಂ. ಮುಖಂಡ ತೇಜೆಂದರ್‌ಸಿಂಗ್, ವರ್ಕ್ ಗಂಭೀರವಾಗಿ ಗಾಯಗೊಂಡಿದ್ದಾರೆ ಸಚಿವರ ನಡೆ ಖಂಡನೀಯ ಎಂದು ಕಿಡಿಕಾರಿದರು.
ಆದ್ದರಿಂದ, ರಾಷ್ಟ್ರಪತಿಗಳು ಸಾವನ್ನಪ್ಪಿರುವ ಮೂವರು ರೈತರಿಗೆ ತಲಾ ೧ ಕೋಟಿ ರೂ., ಮತ್ತು ಗಾಯಗೊಂಡವರಿಗೆ ೫೦ಲಕ್ಷ ರೂ. ಪರಿಹಾರ ನೀಡಬೇಕು. ರೈತರ ಸಾವಿಗೆ ಕಾರಣರಾದವರಿಗೆ ಜೀವಾವಧಿ ಶಿಕ್ಷೆ ಕೊಡಿಸಲು ನ್ಯಾಯಾಲಯಕ್ಕೆ ಹಾಗೂ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಪದಾಧಿಕಾರಿಗಳಾದ ಎ. ತಿಪ್ಪೇಶ್, ನಿಟ್ಟುವಳ್ಳಿ ಜೀವನ್, ಗುರುಮೂರ್ತಿ, ಕೆ. ಬಾನಪ್ಪ, ಫಜಲುಲ್ಲ, ಗದಿಗೇಶ್ ಪಾಳೇದ್, ಇರ್ಫಾನ್, ಮಂಜುನಾಥ ಹೆಚ್.ಎಂ., ಮಂಜುನಾಥ ದೊಡ್ಡಮನೆ, ಮಂಜುನಾಥ ಹರಳಯ್ಯನಗರ, ರುದ್ರೇಶ್ ಮಳಲಕೆರೆ, ಪರಶುರಾಮ, ವಿನಯ್, ಹರೀಶ್, ಆಂಜಿನಪ್ಪ ಮಳಲಕೆರೆ, ಮಂಜುನಾಥ ಮಳಲಕೆರೆ, ಲೋಹಿತ್, ತಿಪ್ಪೇಶಿ ಹೊನ್ನೂರು, ಮಂಜುನಾಥ ಪಿಗ್ನಿ, ಮಂಜುನಾಥ ಎ., ಪರಶುರಾಮ ಹೆಚ್., ಆಫ್ರೂಜ್, ಸಂತೋಷ್ ದೊಡ್ಡಮನೆ ಮತ್ತಿತರರು ಭಾಗವಹಿಸಿದ್ದರು.