ಅಕ್ಟೋಬರ್ 21ರಿಂದ 23 ರವರೆಗೆ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: 8 ಸಾವಿರ ನೌಕರರು ಕ್ರೀಡೆಯಲ್ಲಿ ಭಾಗಿ: ಡಿಸಿ

ದಾವಣಗೆರೆ: ಜಿಲ್ಲೆಯಲ್ಲಿ ಇದೇ ತಿಂಗಳ 21ರಿಂದ 23 ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟ ಐತಿಹಾಸಿಕ ಮೈಲಿಗಲ್ಲಾಗಲಿದ್ದು, ಕ್ರೀಡಾಕೂಟಕ್ಕೆ ಆಗಮಿಸುವ 8 ಸಾವಿರ ಕ್ರೀಡಾಪಟುಗಳಿಗೆ ವಸತಿ, ಸಾರಿಗೆ, ಊಟೋಪಚಾರ ಸೇರಿದಂತೆ ಎಲ್ಲಾ ರೀತಿಯ ಸುಸಜ್ಜಿತ ವ್ಯವಸ್ಥೆಗಳನ್ನು ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ-2021 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜ್ಯಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಡಲು ಈಗಾಗಲೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು, ಸಾರಿಗೆ, ವಸತಿ, ಊಟೋಪಚಾರ, ಸ್ವಚ್ಛತೆ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ 5600 ಪುರುಷರು, 2600 ಮಹಿಳೆಯರು ಸೇರಿದಂತೆ ಒಟ್ಟು 8,200 ಕ್ರೀಡಾಪಟುಗಳು ಪಾಲ್ಗೊಳಲಿದ್ದು, 53 ಇವೆಂಟ್ಸ್ ಗಳನ್ನು ನಡೆಸಲಾಗುತ್ತದೆ. ಕಾರ್ಯಕ್ರಮ ಯಶಸ್ವಿಗೊಳಿಸಲು 18 ಸಮಿತಿಗಳನ್ನು ರಚಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ಕ್ರೀಡಾಪಟುಗಳಿಗೂ ಕ್ಯಾಪ್, ಟ್ರಾಕ್ ಶೂಟ್ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ನೀಡಲಾಗುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ವಿವಿಧ ಇಲಾಖೆಗಳು ಸಚಿವರು ನೆರವೇರಿಸಿಕೊಡಲಿದ್ದಾರೆ.
ಅಕ್ಟೋಬರ್ 21 ರ ಸಂಜೆ ಉದ್ಘಾಟನ ಕಾರ್ಯಕ್ರಮವಿದ್ದು ಅಕ್ಟೋಬರ್ 23 ರ ಮಧ್ಯಾಹ್ನ 3 ಗಂಟೆಗೆ ವಿಜೇತ ತಂಡಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸುವ ಮೂಲಕ ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ ಎಂದರು. ರಾಜ್ಯ ಸರ್ಕಾರ ಈ ಕಾರ್ಯಕ್ರಮಕ್ಕಾಗಿ ಸುಮಾರು ರೂ.2 ಕೋಟಿ ಅನುದಾನ ನೀಡಲಿದ್ದು, ಯಾವುದೇ ಹಣ ಕಾಸಿನ ತೊಂದರೆಯಾಗುವುದಿಲ್ಲ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಖ್ಯಾತ ಸಂಗೀತ ಕಲಾವಿದ ವಿಜಯಪ್ರಕಾಶ್ ಹಾಗೂ ಅವರ ತಂಡ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ ಎಂದರು.
ರಾಜ್ಯಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಜಿಲ್ಲೆಗೆ ಆಗಮಿಸಲಿದ್ದು, ಅವರು ಉಳಿದುಕೊಳ್ಳಲು ಬೇಕಾಗುವ ವಸತಿ, ಸಾರಿಗೆ, ಊಟದ ವ್ಯವಸ್ಥೆಗಳನ್ನು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿರುವ ಹಾಸ್ಟೆಲ್, ಮದುವೆ ಮಂಟಪ, ಕೊಂಡಜ್ಜಿಯಲ್ಲಿರುವ ಪೊಲೀಸ್ ಪಬ್ಲಿಕ್ ಸ್ಕೂಲ್, ಸ್ಕೌಟ್ ಅಂಡ್ ಗೈಡ್ ಹಾಸ್ಟೆಲ್, ಕೋವಿಡ್ ಕೇರ್ ಸೆಂಟರ್‌ಗಳನ್ನು ಸಜ್ಜುಗೊಳಿಸಲು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮ ಅವರಿಗೆ ತಿಳಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ರಿಷ್ಯಂತ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಪಿ.ಮುದಜ್ಜಿ, ಎಎಸ್‌ಪಿ ಕನಿಖಾ ಶುಕ್ರವಾಲ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರ್ ಗಿರೀಶ್, ದೂಢ ಆಯುಕ್ತ ಕುಮಾರಸ್ವಾಮಿ, ಡಿಹೆಚ್‌ಒ ಡಾ.ನಾಗರಾಜ್, ಜಿಲ್ಲಾ ಸರ್ಜನ್ ಜಯಪ್ರಕಾಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಕಾರ್ಯದರ್ಶಿ ಆನಂದ್, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
