ಸಿದ್ದವೀರಪ್ಪ ಬಡಾವಣೆಯಲ್ಲಿ ರಸ್ತೆಗಳು ಮಾರಾಟಕ್ಕಿವೆ.! ಖರೀದಿಸಿದವರ ಗೋಳು, ಪಾಲಿಕೆಯ ಜಾಣ ಕಿವುಡು

IMG-20211028-WA0022

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ 42ನೇ ವಾರ್ಡ್ ಸಿದ್ದವೀರಪ್ಪ ಬಡವಣೆಯಲ್ಲಿ ರಸ್ತೆಗಳನ್ನು ಸಹ ಬಿಡದೆ ಪಾಲಿಕೆ ಅಧಿಕಾರಿಗಳು ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಹಾವಳಿಯಿಂದ ಮಾರಾಟ ಮಾಡಲಾಗಿದೆ ಎಂದು ಸ್ಥಳೀಯ ಸಾರ್ವಜನಿಕರು ಹಾಗೂ ಮಾಜಿ ನಗರ ಪಾಲಿಕೆ ಸದಸ್ಯ ಜಿ.ಬಿ. ಲಿಂಗರಾಜ ಆರೋಪ.

 

ಸಿದ್ದವೀರಪ್ಪ ಬಡಾವಣೆಯ 14ನೇ ಮೇನ್ 1ನೇ ಕ್ರಾಸ್ ನಲ್ಲಿ ಸಾರ್ವಜನಿಕರು ಓಡಾಡಲು ಇರುವ ರಸ್ತೆಯನ್ನೇ ಬೇರೊಬ್ಬರ ಹೆಸರಿಗೆ ಖಾತೆ ಮಾಡಲಾಗಿದೆ ಇದಕ್ಕೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಪಾಲಿಕೆಗೆ ದೂರು ನೀಡಿದರೂ ಸಹ ಪಾಲಿಕೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ ಇದರಲ್ಲಿ ಪಾಲಿಕೆಯ ಕೈವಾಡವಿದೆ ಎಂಬುದು ಸ್ಥಳೀಯರ ಆರೋಪ. ಜಾಗ ಖರೀದಿಸಿದವರು ಹಣ ನೀಡಿ ರಿಜಿಸ್ಟರ್ ಮಾಡಿಕೊಳ್ಳಲಾಗಿದೆ, ಈಗ ಕೇಸ್ ಕೋರ್ಟ್ನಲ್ಲಿ ಇದ್ದು, ಪಾಲಿಕೆಗೆ ಕೋರ್ಟ್ ಸ್ಟೇ ನೀಡಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದರೂ, ಖರೀದಿಸುವಾಗ ತಾವು ಮೋಸ ಹೋಗಿರುವ ಬಗ್ಗೆ ಅವರಲ್ಲಿರುವ ದುಗುಡ ಎದ್ದು ಕಾಣುತಿತ್ತು.

 

 

ಇನ್ನೂ ಇದೆ 14 ನೇ ಮೇನ್ ನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಮಕ್ಕಳ ಉದ್ಯಾನವನ ಪಕ್ಕದಲ್ಲಿರುವ ಪಾಲಿಕೆಯ (25+40/2 ಅಡಿ ಅಗಲ * 91 ಅಡಿ ಉದ್ದ) ಅದಕ್ಕೆ ಹೊಂದಿಕೊಂಡಂತೆ ಪ್ರಭಾವಿ ಒಬ್ಬರ ನಿವೇಶನವಿದ್ದು, ಅವರು ಈ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರ ಆರೋಪ, ಇದಕ್ಕೆ ಪುಷ್ಟಿ ನೀಡುವಂತೆ ಪಾಲಿಕೆ ಜಾಗದಲ್ಲಿ ಹಾಕಲಾಗಿದ್ದ “ಈ ಸ್ವತ್ತು ನಗರಪಾಲಿಕೆಗೆ ಸೇರಿದ್ದು” ಎಂಬ ಬೋರ್ಡನ್ನು ಕಿತ್ತು ಹಾಕಿರುವುದು.

ಇನ್ನು ಸಿದ್ದವೀರಪ್ಪ ಬಡಾವಣೆಯ ಮುಖ್ಯರಸ್ತೆಯಲ್ಲಿಯೇ ಎರಡಂತಸ್ತಿನ ಮನೆಯ ಮೇಲೆ ಮೊಬೈಲ್ ಟವರ್ ಹಾಕಲಾಗುತ್ತಿದ್ದು ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಜನಪ್ರತಿನಿಧಿಗಳು ಅಧಿಕಾರಿಗಳು ಇದಕ್ಕೆ ಹೇಗೆ ಅನುಮತಿ ನೀಡಿದರು, ಇವರುಗಳಿಗೆ ಸಾರ್ವಜನಿಕರ ಬಗ್ಗೆ ಕಾಳಜಿ ಇಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ ತಕ್ಷಣವೇ ಮೊಬೈಲ್ ಹಾಕುವುದನ್ನು ನಿಲ್ಲಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸ್ಥಳಕ್ಕೆ ವಿಪಕ್ಷ ನಾಯಕ ಏ.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಮಾಜಿ ಉಪ ಮೇಯರ್ ಗೌಡ್ರ ರಾಜಶೇಖರ್ ಹಾಗೂ ಸ್ಥಳೀಯ ನಾಗರಿಕರು ಬೇಟಿ ನೀಡಿ ಪರಿಶೀಲಿಸಿದರು.

 

ವಾರ್ಡ್ ನಲ್ಲಿರುವ ಪಾಲಿಕೆ ಜಾಗಗಳ ಬಗ್ಗೆ ತಮ್ಮಲ್ಲಿ ಸಂಪೂರ್ಣ ಮಾಹಿತಿ ಇದ್ದು, ಯಾವುದೇ ಕಾರಣಕ್ಕೂ ಪಾಲಿಕೆಯ ಜಾಗವನ್ನು ಅತಿಕ್ರಮಣ ಮಾಡಲು ಬಿಡುವುದಿಲ್ಲ ಎಂದು ಪಣತೊಟ್ಟಿರುವ ಮಾಜಿ ನಗರಪಾಲಿಕೆ ಸದಸ್ಯ ಜಿ.ಬಿ ಲಿಂಗರಾಜ್.

ನಗರದ ಪ್ರತಿಷ್ಠಿತ ಹಾಗೂ ವಿದ್ಯಾವಂತರೇ ಹೆಚ್ಚಿರುವ ಬಡಾವಣೆ ಪರಿಸ್ಥಿತಿಯೇ ಹೀಗಾದರೆ ಬೇರೆ ಕಡೆ ಇನ್ನೇನು… ಈಗಲಾದರೂ ಪಾಲಿಕೆ ಎಚ್ಚೆತ್ತುಕೊಳ್ಳುವುದೋ ಅಥವಾ ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗಿ ಸುಮ್ಮನಿರುವುದೋ ಕಾದು ನೋಡಬೇಕು.

*ಕೆ.ಎಲ್.ಹರೀಶ್ ಬಸಾಪುರ*

Leave a Reply

Your email address will not be published. Required fields are marked *

error: Content is protected !!