ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನ ಬದಲಾವಣೆ ನಿಜವಾ.?!! ಕಟೀಲ್ ಸ್ಥಾನ ತುಂಬುವವರು ಇವರೇನಾ.?!

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಸ್ಥಾನಕ್ಕೆ ಬೇರೊಬ್ಬ ನಾಯಕರು ಬರಲಿದ್ದಾರೆ ಎನ್ನುವ ವದಂತಿ ಹಬ್ಬಿದೆ.!
ಕಟೀಲ್ ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಸಂಘಟಿಸುವಲ್ಲಿ ವಿಫಲ, ಉಪಚುನಾವಣೆ ಹಿನ್ನಡೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸೋತಿದ್ದಾರೆ ಎಂಬ ಅಸಮಾಧಾನ ಬಿಜೆಪಿ ಪಾಳಯದಲ್ಲಿ ಹಬ್ಬಿರುವುದರಿಂದ ಅವರ ಸ್ಥಾನ ಬದಲಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದು, ಇದೇ 9ರಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಅಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಖಜಾಂಚಿ, ಜಿಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕೋರ್ ಕಮಿಟಿ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ನಳೀನ್‍ಕುಮಾರ್ ಕಟೀಲ್ ಒಂದು ವೇಳೆ ಅಧ್ಯಕ್ಷ ಸ್ಥಾನದಿಂದ ಇಳಿದರೆ ತೆರವಾಗಲಿರುವ ಈ ಸ್ಥಾನಕ್ಕೆ ದಲಿತ ಸಮುದಾಯದ ಹಾಗೂ ಆರ್‍ಎಸ್‍ಎಸ್ ಹಿನ್ನೆಲೆಯಲ್ಲಿರುವ ವ್ಯಕ್ತಿಯನ್ನೇ ಅಧ್ಯಕ್ಷರನ್ನಾಗಿ ಮಾಡುವ ಸಂಭವವಿದೆ. ಬಿಜೆಪಿ ಮೂಲಗಳು ಹೇಳುವ ಪ್ರಕಾರ ಈ ಬಾರಿ ಅಧ್ಯಕ್ಷ ಸ್ಥಾನವನ್ನು ಆರ್‍ಎಸ್‍ಎಸ್ ಕಟ್ಟಾಳು ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ನೀಡುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಲಿಂಬಾವಳಿ ಪಕ್ಷ ನಿಷ್ಠರೂ ಹೌದು. ಒಂದು ಕಡೆ ಯಡಿಯೂರಪ್ಪ ವೀರಶೈವ ಮತಗಳನ್ನು ಸೆಳೆದರೆ, ಪರಿಶಿಷ್ಟ ಜಾತಿಗೆ ಗೋವಿಂದ ಕಾರಜೋಳ, ಪರಿಶಿಷ್ಟ ವರ್ಗಕ್ಕೆ ಶ್ರೀರಾಮುಲು, ರಮೇಶ್ ಜಾರಕಿಹೊಳಿ, ಒಕ್ಕಲಿಗ ಸಮುದಾಯಕ್ಕೆ ಆರ್.ಅಶೋಕ್, ಡಾ.ಅಶ್ವಥ್ ನಾರಾಯಣ, ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಹಿಂದುಳಿದ ವರ್ಗಕ್ಕೆ ಕೆ.ಎಸ್.ಈಶ್ವರಪ್ಪ, ಕೋಟಾ ಶ್ರೀನಿವಾಸ ಪೂಜಾರಿ ಹೀಗೆ ಜಾತಿ ಸಮೀಕರಣವನ್ನು ಹೆಣೆದು 2023ರ ಚುನಾವಣೆಯನ್ನು ಎದುರಿಸಲು ಬಿಜೆಪಿ ಸಜ್ಜಾಗಿದೆ.
ಸಾಮಾನ್ಯವಾಗಿ ಬಿಜೆಪಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡುವ ಸಂಪ್ರದಾಯವಿದೆ. ರಾಷ್ಟ್ರ ಮಟ್ಟದಲ್ಲಾಗಲಿ ಅಥವಾ ರಾಜ್ಯ ಮಟ್ಟದಲ್ಲಾಗಲಿ ಒಂದು ಬಾರಿ ಅಧ್ಯಕ್ಷರಾದರೆ ಮೂರು ವರ್ಷ ಅವರ ಸ್ಥಾನ ಅಬಾಧಿತ ಎನ್ನಲಾಗಿದ್ದರೂ, ಇತ್ತೀಚೆಗೆ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಹಾನಗಲ್‍ನಲ್ಲಿ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಈ ವದಂತಿ ಹಬ್ಬಿದೆ.
ಬಸವ ಕಲ್ಯಾಣ, ಮಸ್ಕಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಬಿಎಸ್‍ವೈ ಪ್ರಭಾವವೇ ಕೆಲಸ ಮಾಡಿತ್ತು. ಇಲ್ಲಿ ಪಕ್ಷದ ಅಧ್ಯಕ್ಷರಾಗಿರುವ ಕಟೀಲ್ ಅವರ ಕೊಡುಗೆ ಶೂನ್ಯ ಎಂದು ಪಕ್ಷದ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಹಾನಗಲ್ ಉಪಚುನಾವಣೆಯಲ್ಲೂ ಸೋಲಿಗೆ ವ್ಯವಸ್ಥಿತ ಸಂಘಟನೆಯ ಕೊರತೆಯೇ ಕಾರಣ ಎನ್ನಲಾಗಿದೆ. ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗಿರುವ ಕಟೀಲ್ ಅವರಲ್ಲಿ, ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲೂ ಅನುಭವದ ಕೊರತೆ ಕಾಣುತ್ತಿದೆ.
ಕಟೀಲು ಪಕ್ಷ ಸಂಘಟನೆಯಲ್ಲಿ ವಿಫಲರಾಗಿರುವುದಷ್ಟೆ ಅಲ್ಲ ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮುಜುಗರ ಸೃಷ್ಟಿಸುವುದು ಕೂಡ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಪಕ್ಷಕ್ಕೆ ದುಡಿಯುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ಬಣದ ಒಬ್ಬೊಬ್ಬರನ್ನೇ ಹಂತ ಹಂತವಾಗಿ ಪಕ್ಷದ ಕಚೇರಿಯಿಂದ ನಾಯಕರೊಬ್ಬರ ನಿರ್ದೇಶನದಂತೆ ಹೊರಹಾಕುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿದರು ಎನ್ನುವ ದೂರು ಕೇಳಿಬಂದಿದೆ.