ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸಕ್ಕೆ, ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೀಡಬೇಕು.! ಕೆ.ಎಲ್.ಹರೀಶ್ ಬಸಾಪುರ

ದಾವಣಗೆರೆ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬೈರತಿ ಬಸವರಾಜ ರವರು ಜಿಲ್ಲೆಗೆ ಆಗಮಿಸಿದಾಗ ಅವರ ಭದ್ರತಾ ನಿಯೋಜನೆಗಾಗಿ ಜಿಲ್ಲೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಗೃಹ ಸಚಿವರು ನೀಡಬೇಕು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್.ಹರೀಶ್ ಬಸಪುರ ಮನವಿ ಮಾಡಿದ್ದಾರೆ.
ಉಸ್ತುವಾರಿ ಸಚಿವರು ವಾರಕ್ಕೊಮ್ಮೆ – ಹದಿನೈದು ದಿನಕ್ಕೊಮ್ಮೆ ಅತಿಥಿಗಳಾಗಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು ಅಂತಹ ಸಂದರ್ಭದಲ್ಲಿ ಅವರು ಸಂಚರಿಸುವ ರಸ್ತೆಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ, ಅದಕ್ಕಾಗಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವಂತಹ ಸಿಬ್ಬಂದಿಗಳನ್ನು ಸಹ ಬಳಸಿಕೊಳ್ಳಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗುತ್ತಿದೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಷ್ಟೊಂದು ಪೊಲೀಸ್ ಸಿಬ್ಬಂದಿಯ ಅವಶ್ಯಕತೆ ಇದೆಯೇ ಎಂಬುದನ್ನು ಅವರೇ ತಿಳಿಸಬೇಕಾಗಿದೆ.
ಈ ಹಿಂದೆ ಜಿಲ್ಲೆಯವರೇ ಆದ ಡಾ. ಶಾಮನೂರು ಶಿವಶಂಕರಪ್ಪನವರು, ಎಸ್.ಎಸ್. ಮಲ್ಲಿಕಾರ್ಜುನ್ ರವರು, ಎಸ್.ಎ. ರವೀಂದ್ರನಾಥ್ ರವರು ಸಹ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಅವರು ಕೇವಲ ಎಸ್ಕಾರ್ಟ್ ಬಳಸುತ್ತಿದ್ದರು ಆದರೆ ಈಗಿನ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ್ ಅವರಿಗೆ ಓಡಾಡುವ ರಸ್ತೆ ಗಳಲ್ಲೆಲ್ಲಾ ಪೊಲೀಸ್ ಸಿಬ್ಬಂದಿ ಯಾಕೆ ಬೇಕು. ಇಷ್ಟೊಂದು ಪೋಲಿಸ್ ನಿಯೋಜನೆ ಸಚಿವರ ಬಯಕೆಯೋ ಅಥವಾ ಪೊಲೀಸ್ ಮೇಲಾಧಿಕಾರಿಗಳ ಕ್ರಮವೂ ಎಂಬುದನ್ನು ಅಧಿಕಾರಿಗಳೇ ತಿಳಿಸಬೇಕಾಗಿದೆ.
ನಿನ್ನೆ ಸಚಿವರು ನಗರಕ್ಕೆ ಭೇಟಿ ನೀಡಿದಾಗ ಪೊಲೀಸ್ ಸಿಬ್ಬಂದಿಗಳು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ರಸ್ತೆಯಲ್ಲಿಯೇ ಕಾರ್ಯನಿರ್ವಹಿಸಿದರು, ಅವರಿಗೆ ತಿಂಡಿ ಊಟದ ವ್ಯವಸ್ಥೆಯೂ ಇಲ್ಲ ಎಂಬುದು ಮಾತ್ರ ವಿಷಾದನೀಯ.
ಪೊಲೀಸ್ ಸಿಬ್ಬಂದಿ ಎಂದರೆ ಎಲ್ಲರಿಗೂ ಆದಾಯ ಇರುವುದಿಲ್ಲ, ಸಂಬಳ ನೆಚ್ಚಿಕೊಂಡು ಜೀವನ ನಡೆಸುವ ಸಿಬ್ಬಂದಿಯು ಇರುತ್ತಾರೆ ಅಂತವರಿಗೆ ಈ ವ್ಯವಸ್ಥೆ ಅಡ್ಡದಾರಿಗೆ ಹೋಗುವಂತೆ ಮಾಡಿದರೂ ಆಶ್ಚರ್ಯವಿಲ್ಲ…
ಏನೇ ಆಗಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸುವಾಗ ರಸ್ತೆಯಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜನೆ ನಿಲ್ಲಬೇಕು ಅಥವಾ ಹೆಚ್ಚುವರಿ ಪೊಲೀಸ್ ನಿಯೋಜನೆ ಆಗಲೇಬೇಕು ಎನ್ನುವುದಾದರೆ ಗೃಹ ಸಚಿವರು ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬರುವ ಸಂದರ್ಭದಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ಕಳುಹಿಸಿ ಕೊಡಬೇಕಾಗಿ ವಿನಂತಿ.
ಕೆ.ಎಲ್.ಹರೀಶ್ ಬಸಾಪುರ.