ಅತಿವೃಷ್ಟಿಯಿಂದ ಜಲಾವೃತವಾಗುವುದನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ – ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ರಾಕೇಶ್ ಸಿಂಗ್

IMG-20211123-WA0011

 

ಬೆಂಗಳೂರು: ಬೆಂಗಳೂರು ನಗರದಲ್ಲಿ ಮಳೆಗಾಲ ಮತ್ತು ಅತಿವೃಷ್ಟಿಯಿಂದ ಹಲವು ಪ್ರದೇಶಗಳು ಜಲಾವೃತವಾಗುವುದನ್ನು ತಡೆಯಲು ತ್ವರಿತವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕುಂಭದ್ರೋಣ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು ಮುಖ್ಯಮಂತ್ರಿಗಳೇ ಖುದ್ದು ಸ್ಥಳ ಪರಿಶೀಲನೆ ಮಾಡಿದ ಹಿನ್ನೆಲೆಯಲ್ಲಿ ತುರ್ತು ಬಿಬಿಎಂಪಿ ಉನ್ನತ ಅಧಿಕಾರಿಗಳ ಸಭೆ ನಡೆಸಿದ ರಾಕೇಶ್ ಸಿಂಗ್, ನಗರದಲ್ಲಿ ಮಳೆಗಾಲದ ವೇಳೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಎಲ್ಲಾ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಮಳೆಗಾಲದಲ್ಲಿ ರಾಜಕಾಲುವೆ, ರಸ್ತೆ ಬದಿಯ ಚರಂಡಿಗಳು, ಶೋಲ್ಡರ್ ಡ್ರೈನ್‌ಗಳಲ್ಲಿ ತುಂಬಿರುವ ಹೂಳನ್ನು ತೆಗೆದು ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ರಸ್ತೆಗಳಲ್ಲಿ ಅಗೆದು ಬಿಟ್ಟಿರುವ ಮಣ್ಣು ನೀರುಗಾಲುವೆಗಳಿಗೆ ಸೇರದಂತೆ ಕೂಡಲೇ ತೆರುವುಗೊಳಿಸುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಬೆಸ್ಕಾಂ ಮತ್ತು ಜಲಮಂಡಳಿಯಿಂದ ರಸ್ತೆ ಕತ್ತರಿಸಬೇಕಾದರೆ ಕಡ್ಡಾಯವಾಗಿ ಪಾಲಿಕೆಯಿಂದ ಅನುಮತಿಪಡೆಯಬೇಕು ಹಾಗೂ ರಸ್ತೆ ಕತ್ತರಿಸಿದ ಭಾಗವನ್ನು ಸಂಬಂಧಪಟ್ಟ ಇಲಾಖೆಗಳೇ ತ್ವರಿತವಾಗಿ ಪುನಶ್ಚೇತನ ಕಾರ್ಯ ಮಾಡಬೇಕು. ಪುನಶ್ಚೇತನ ಮಾಡಿರುವ ಬಗ್ಗೆ ಪಾಲಿಕೆಯ ಅಧಿಕಾರಿಗಳು ಪ್ರಮಾಣಿಕರಿಸಬೇಕು. ಎಲ್ಲಾ ವಾರ್ಡ್ ಗಳಲ್ಲಿಯೂ ಆದ್ಯತೆ ಮೇರೆಗೆ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದ ರಾಕೇಶ್ ಸಿಂಗ್, ಆಯಾ ವಲಯಗಳ ಮುಖ್ಯ ಇಂಜಿನಿಯರ್‌ಗಳು ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮೇಲ್ವಿಚಾರಣೆ ಮಾಡಿ ಕೂಡಲೇ ವರದಿ ನೀಡಲು ಸೂಚಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಎಲ್ಲಾ ವಲಯ ಆಯುಕ್ತರು, ಜಂಟಿ ಆಯುಕ್ತರು, ಇಂಜನಿಯರಿಂಗ್ ವಿಭಾಗದ ಮುಖ್ಯಸ್ಥರು, ಮುಖ್ಯ ಇಂಜಿನಿಯರ್‌ಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!