ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರಗತಿ ಪರಿಶೀಲನೆ: ಮಳೆ ನಷ್ಟವನ್ನು ನವೆಂಬರ್ 30ರೊಳಗೆ ಪರಿಹಾರ ಪೋರ್ಟಲ್ ನಲ್ಲಿ ದಾಖಲಿಸಲು ಸೂಚನೆ

ಚಿತ್ರದುರ್ಗ: ರಾಜ್ಯಾದ್ಯಂತ ಕಳೆದ ವಾರದ ಸುರಿದ ಅಕಾಲಿಕ ಮಳೆಯಿಂದಾಗಿ ಕಟಾವು ಹಂತದಲ್ಲಿದ್ದ ಬೆಳೆಗಳು ನಷ್ಟವಾಗಿ ಅಪಾರ ಪ್ರಮಾಣದ ಹಾನಿಉಂಟಾಗಿದೆ. ಈ ಸಂದರ್ಭದಲ್ಲಿ ಸಕಾಲದಲ್ಲಿ ರೈತರಿಗೆ ನೆರವಾಗುವುದು ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕರಾರುವಕ್ಕಾದ ಸಮೀಕ್ಷಾ ವರದಿಯನ್ನು ಅಪ್ಲೋಡ್ ಮಾಡಬೇಕು ಎಂದು ಆರ್ಥಿಕ ಇಲಾಖೆ (ವೆಚ್ಚ) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಡಾ.ಪಿ.ಸಿ.ಜಾಫರ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಕಾಲಿಕ ಮಳೆಯಿಂದಾಗಿ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳು ಹಾನಿಯಾಗಿದ್ದು, ಜಂಟಿ ಸಮೀಕ್ಷೆ ನಡೆಸಿ ಬೆಳೆ ಹಾನಿಯ ವಿವರಗಳನ್ನು “ಪರಿಹಾರ” ತಂತ್ರಾಶದಲ್ಲಿ ನವೆಂಬರ್ 30ರೊಳಗೆ ಮುಕ್ತಾಯಗೊಳಿಸಬೇಕು ಎಂದು ಹೇಳಿದರು.
ಕಳೆದ ವಾರ ಸುರಿದ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ 346.80 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 102731.00 ಹೆಕ್ಟೇರ್ ವಿವಿಧ ಕೃಷಿ ಬೆಳೆಗಳು ಮಳೆಯಿಂದ ಹಾನಿಗೊಳಗಾಗಿವೆ. ಈಗಾಗಲೇ ಹಾನಿಗೊಳಗಾದ 7524 ಫಲಾನುಭವಿಗಳ ಅಂಕಿ ಅಂಶಗಳನ್ನು ಫೋರ್ಟ್ಲ್ನಲ್ಲಿ ದಾಖಲಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಕಾರ್ಯದರ್ಶಿಗಳು ಹಾನಿಯಾದ ಬೆಳೆಯ ಜಂಟಿ ಸಮೀಕ್ಷೆಯನ್ನು ನವೆಂಬರ್ 30ರೊಳಗೆ ಮುಕ್ತಾಯಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ಸ್ಪಷ್ಟ ನಿರ್ದೇಶನ ನೀಡಿದ್ದು, ಬೆಳೆ ಸಮೀಕ್ಷೆ ಜೊತೆಗೆ ಇದೇ ಅವಧಿಯಲ್ಲಿ ಮಾಹಿತಿ ದಾಖಲೀಕರಿಸಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಕಟಾವಿಗೆ ಬಂದಿದ್ದ ಶೇಂಗಾ ಬೆಳೆ ಹೆಚ್ಚು ನಷ್ಟವಾಗಿದ್ದು, ಇದರ ಜೊತೆಗೆ ರಾಗಿ, ಮೆಕ್ಕೆಜೋಳ ಬೆಳೆಗಳು ನಷ್ಟವಾಗಿವೆ. ಕಂದಾಯ, ತೋಟಗಾರಿಕೆ, ಕೃಷಿ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಳ್ಳಬೇಕು.
ಬೆಳೆ ವಿಮೆ ನೋಂದಣಿ ಕಾರ್ಯ ಹೆಚ್ಚಳವಾಗಬೇಕು. ಬೆಳೆ ನಷ್ಟದ ಸಂದರ್ಭದಲ್ಲಿ ಬೆಳೆವಿಮೆಯಿಂದ ರೈತರಿಗೆ ಅನುಕೂಲವಾಗಲಿದೆ. ಎಂದು ಹೇಳಿದರು.
ಪೂರ್ಣ ಹಾನಿ, ತೀವ್ರತರವಾಗಿ ಹಾನಿಗೊಳಗಾದ ವಾಸ ಮನೆಗಳಿಗೆ ರೂ.95,100/- ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳಿಗೆ ರೂ.50,000/- ಪರಿಹಾರ ಮಂಜೂರಾತಿ ನೀಡಿ ಆರ್ಜಿಆರ್ಹೆಚ್ಸಿಎಲ್ ತಂತ್ರಾಂಶದಲ್ಲಿ ನಮೂದಿಸಬೇಕು. ಸಮೀಕ್ಷೆಯನ್ನು ಕೈಗೊಂಡು ದುರಸ್ತಿ ಮಾಡುವುದಿದ್ದಲ್ಲಿ ವಾಸ ಮಾಡಲು ಯೋಗ್ಯವೆಂದು ಕಂಡುಬಂದಲ್ಲಿ ಮಾನದಂಡ ಅನುಸರಿಸಿ ತಕ್ಷಣವೇ ಪರಿಹಾರ ನೀಡಲು ಕ್ರಮವಹಿಸಬೇಕು. ಸಂಪೂರ್ಣವಾಗಿ ಹಾನಿಯಾಗಿದ್ದಲ್ಲಿ ಅಂತಹ ಮನೆಗಳ ಅಂಕಿಅಂಶಗಳನ್ನು ತಕ್ಷಣವೇ ಅಪ್ಲೋಡ್ ಮಾಡಬೇಕು ಎಂದು ಸೂಚನೆ ನೀಡಿದರು.
2021ರ ಜನವರಿ 01 ರಿಂದ ನವೆಂಬರ್ 23 ರವರೆಗೆ ಜಿಲ್ಲೆಯ ವಾಡಿಕೆ ಮಳೆ 528 ಮಿ.ಮೀ ಇದ್ದು, ನವೆಂಬರ್ 23ರ ಅಂತ್ಯದವರೆಗೆ 843 ಮಿ.ಮೀ ವಾಸ್ತವಿಕ ಮಳೆಯಾಗಿದ್ದು, ಶೇ.60 ರಷ್ಟು ಅಧಿಕವಾಗಿದೆ. ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ 2 ಪೂರ್ಣ ಮನೆಗಳು, 1209 ಮನೆಗಳು ಹಾನಿಗೊಳಗಾಗಿದ್ದು, ಜಿಲ್ಲೆಯಲ್ಲಿ ಒಟ್ಟು 1211 ವಾಸದ ಮನೆಗಳು ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 32 ಸಣ್ಣ ಜಾನುವಾರುಗಳಿಗೆ ಜೀವಹಾನಿಯಾಗಿದ್ದು, ಪರಿಹಾರ ನೀಡಲು ತಾಲ್ಲೂಕುವಾರು ವರದಿಯನ್ನು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನೀಡಲಾಗಿದೆ. ಅಮೃತಧಾರೆ, ಅಮೃತಸಿರಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಯಿಂದ ಫಲಾನುಭವಿಗಳ ಆಯ್ಕೆ ಮಾಡಬೇಕಿದೆ. ಪಶುಪಾಲನಾ ಸೇವಾ ಇಲಾಖೆಯಲ್ಲಿ ಶೇ.50ರಷ್ಟು ಸಿಬ್ಬಂದಿಗಳ ಕೊರತೆ ಇದೆ ಎಂದು ಇಲಾಖೆಯ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಿಕೆ ಪ್ರಮಾಣ ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಈಗಾಗಲೇ ಯುಎಸ್ಎ ಹಾಗೂ ಯೂರೋಪ್ಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮುಂಬರುವ ಮಾರ್ಚ್ನಲ್ಲಿ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಗಾಗಿ ಮುಖ್ಯವಾಗಿ ವ್ಯಾಕ್ಸಿನೇಷನ್ಗೆ ಒತ್ತು ಕೊಡಬೇಕು. ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ ಕೋವಿಡ್ ಲಸಿಕೆ ಪ್ರಗತಿ ಕಡಿಮೆಯಿದ್ದು, ಈ ನಿಟ್ಟಿನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡು ಕೋವಿಡ್ ಲಸಿಕೆ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಕೋವಿಡ್ನಿಂದ ಜಿಲ್ಲೆಯಲ್ಲಿ 208 ಜನರು ಮರಣ ಹೊಂದಿದ್ದು, ಈಗಾಗಲೇ 118 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 98 ಪ್ರಕರಣಗಳಿಗೆ ಮಾತ್ರ ಪರಿಹಾರ ವಿತರಿಸುವುದು ಬಾಕಿ ಇದ್ದು, ಎಲ್ಲ ದಾಖಲೆಗಳನ್ನು ಈಗಾಗಲೇ ಸಂಗ್ರಹಿಸಿದ್ದು, ತಕ್ಷಣ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಕಳೆದ ಎರಡು ವರ್ಷಗಳಿಂದ ಶಾಲಾ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಮಕ್ಕಳಿಗೆ ಎರಡು ವರ್ಷ ಸರಿಯಾಗಿ ಕಲಿಕೆಯಾಗಿಲ್ಲ. ಆನ್ಲೈನ್ ತರಗತಿಗಳು ಮಕ್ಕಳಿಗೆ ಪರಿಣಾಮಕಾರಿಯಾಗಿ ಅರ್ಥವಾಗಿಲ್ಲ. ಇದೀಗ ಭೌತಿಕ ತರಗತಿಗಳು ಆರಂಭವಾಗಿದ್ದು, ಹಾಗಾಗಿ ಶಾಲೆಯ ಶಿಕ್ಷಕರು ಮಕ್ಕಳಿಗೆ ಎರಡು ವರ್ಷಗಳ ಕಲಿಕೆಯ ಅಂಶಗಳನ್ನು ಕಲಿಸುವ ನಿಟ್ಟಿನಲ್ಲಿ ಯೋಜನೆ ತಯಾರಿಸಿ, ಕಲಿಕೆಯ ಮೌಲ್ಯಮಾಪನ ಮಾಡಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಆಕ್ಸಿಜನ್ ಪ್ಲಾಂಟ್ಗಳ ನಿರ್ವಹಣೆಯನ್ನು ಪ್ರತಿನಿತ್ಯವೂ ಪರಿಶೀಲಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.