Vaccine Drama Video: ಲಸಿಕಾ ಅಭಿಯಾನದಲ್ಲಿ ಇಲ್ಲಸಲ್ಲದ ಡ್ರಾಮಾ.! ಡಿಸಿ ಸಾಹೇಬ್ರ ಖಡಕ್ ವಾರ್ನಿಂಗ್ ಹೇಗಿತ್ತು ಅಂತೀರಾ.!

ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಂಗಳವಾರ ನಡೆದ ಲಸಿಕಾ ಅಭಿಯಾನದಲ್ಲಿ ಮನೆ ಮನೆಗೆ ತೆರಳಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ವಿವಿಧ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದವರಿಗೆ ಲಸಿಕೆ ಕುರಿತ ಆತಂಕವನ್ನು ದೂರಗೊಳಿಸಿ, ಲಸಿಕೆ ಪಡೆಯಲು ಮನವೊಲಿಸುವಲ್ಲಿ ಯಶಸ್ವಿಯಾದರು.
ಪಟ್ಟಣದ ನೀಲಕಂಠೇಶ್ವರ ನಗರ, ಬೆಂಕಿ ನಗರ, ಕಾಳಿದಾಸ ನಗರ ಹಾಗೂ ಹಳ್ಳದ ಕೇರಿ ಬಡಾವಣೆಗಳ ನಿವಾಸಿಗಳಿಗೆ ಮೊದಲ ಹಾಗೂ ಎರಡನೇ ಡೋಸ್ ಪಡೆಯದ ಎಲ್ಲ ಅರ್ಹರಿಗೂ ಲಸಿಕೆ ನೀಡಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಬೀಳಗಿ, ಜಿಲ್ಲೆಯಲ್ಲಿ ಲಸಿಕೆ ನೀಡಿಕೆ ಪ್ರಮಾಣ ಕಡಿಮೆಯಿದ್ದು ತೀವ್ರಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಲಸಿಕೆ ನೀಡಿಕೆ ಪ್ರಮಾಣವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಕಳೆದೆರಡು ದಿನಗಳಲ್ಲಿ ೨೫ ಸಾವಿರದಷ್ಟು ಲಸಿಕೆ ನೀಡಿದ್ದು, ಇಂದೂ ಕೂಡ ೨೫ ರಿಂದ ೩೦ ಸಾವಿರದಷ್ಟು ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕೆಲ ಹಿಂದುಳಿದ ಪ್ರದೇಶಗಳಲ್ಲಿ ಲಸಿಕೆ ಬಗೆಗೆ ಹಿಂಜರಿಕೆ ಹಾಗೂ ತಪ್ಪು ಕಲ್ಪನೆ ಇದ್ದು ಅವುಗಳನ್ನು ಹೋಗಲಾಡಿಸುವ ಮೂಲಕ ಲಸಿಕೆ ನೀಡಲಾಗುತ್ತಿದೆ. ಮೂರನೇ ಅಲೆ ತಡೆಗಟ್ಟುವಲ್ಲಿ ಲಸಿಕೆಯೊಂದೆ ಮದ್ದಾಗಿರುವ ಕಾರಣ ಜನರು ಮುಂದೆಬಂದು ಲಸಿಕೆ ಪಡೆಯಬೇಕಿದೆ ಎಂದು ಕರೆ ನೀಡಿದರು.
ಈಗಾಗಲೇ ಮೂರ್ನಾಲ್ಕು ತಿಂಗಳಿನಿಂದ ಮೂರನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಸಿದ್ದತೆ ಮಾಡಿಕೊಂಡಿದ್ದೇವೆ. ಅಗತ್ಯ ಔಷಧಿ, ವೆಂಟಿಲೇಟರ್, ಮಕ್ಕಳ ಐಸಿಯು, ಮಾನವ ಸಂಪನ್ಮೂಲ ತರಬೇತಿಯೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಗಳು ಸಿದ್ದವಾಗಿವೆ ಹಾಗೂ ಹೊರ ರಾಜ್ಯ, ಹೊರ ದೇಶಗಳಿಂದ ಬರುವವರ ವಿವರ ಪಡೆದು, ನಮ್ಮ ಸರ್ವೇಕ್ಷಣಾ ತಂಡ ಅವರುಗಳ ತಪಾಸಣೆ ನಡೆಸಿ, ರೋಗ ಲಕ್ಷಣಗಳು ಕಂಡುಬಂದರೆ ಅಂತಹವರನ್ನು ಐಸೋಲೇಟ್ ಮಾಡಲಾಗುತ್ತಿದ್ದು, ಮತ್ತಷ್ಟು ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಹೇಳಿದರು.
ದಾವಣಗೆರೆ ನಗರಕ್ಕೆ ಸೋಮವಾರ ಆಗಮಿಸಿದ್ದ ಮುಖ್ಯಮಂತ್ರಿಗಳು ಗರಿಷ್ಠ ಸಂಖ್ಯೆಯ ಟೆಸ್ಟ್‌ಗಳನ್ನು ಮಾಡುವುದು ಹಾಗೂ ಹೆಚ್ಚು ಜನಜಂಗುಳಿ ಸೇರದಂತೆ ನೋಡಿಕೊಳ್ಳುವುದು ಮತ್ತು ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೂಡಲು ಕ್ರಮ ವಹಿಸುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಲಸಿಕಾ ಅಭಿಯಾನದಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಡಾ. ನಟರಾಜ್, ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ, ನಗರಸಭೆ ಪೌರಾಯುಕ್ತೆ ಲಕ್ಷ್ಮಿ, ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ನಜ್ಮ, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.