ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ಪ್ರಸ್ತುತ’ ಪಾಕ್ಷಿಕದ ಚಂದಾ ಅಭಿಯಾನಕ್ಕೆ ದಾವಣಗೆರೆಯಲ್ಲಿ ಚಾಲನೆ

ದಾವಣಗೆರೆ: ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರಸ್ತುತ’ ಪಾಕ್ಷಿಕದ ಚಂದಾ ಅಭಿಯಾನಕ್ಕೆ ದಾವಣಗೆರೆಯಲ್ಲಿ ಬುಧವಾರ ಚಾಲನೆ ನೀಡಲಾಯಿತು.ದಾವಣಗೆರೆಯ ರೋಟರಿ ಬಾಲಭವನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಹಿರಿಯ ಬಂಡಾಯ ಸಾಹಿತಿ ಹುಲಿಕಟ್ಟಿ ಚನ್ನಬಸಪ್ಪ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಪಾಕ್ಷಿಕ ಸಮಾಜಕ್ಕೆ ಕನ್ನಡಿಯಾಗಿ ಕೆಲಸ ಮಾಡುತ್ತಿದೆ, ಸಮಾಜದ ಹುಳುಕುಗಳ ಮೇಲೆ ಬೆಳಕು ಚೆಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪತ್ರಿಕೆ ಮಾಡುತ್ತಿದ್ದು, ಸಮ ಸಮಾಜ ನಿರ್ಮಾಣ ಮತ್ತು ಸಾಮರಸ್ಯಕ್ಕೆ ಅಪಾರ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಈಗಿನ ಮಾಧ್ಯಮಗಳು ಬಂಡವಾಳಶಾಹಿಗಳು, ಕಾರ್ಪೊರೇಟ್ ಮತ್ತು ರಾಜಕಾರಣಿಗಳ ಕೈ ಗೊಂಬೆಯಾಗಿ ವರ್ತಿಸುತ್ತಿವೆ. ಪತ್ರಿಕೆಗಳು ಪತ್ರಿಕೋದ್ಯಮದ ನೈಜ ಉದ್ದೇಶವನ್ನು ಅರಿತು ಕೆಲಸ ಮಾಡಬೇಕು. ಫ್ಯಾಶಿಸ್ಟರು ಪತ್ರಿಕೆಗಳ ಮೇಲೆ ಕೆಂಗಣ್ಣು ಬೀರಿದ್ದು, ಪ್ರಾಮಾಣಿಕ ಮತ್ತು ಸತ್ಯ ಬರೆಯುವ ಪತ್ರಕರ್ತರನ್ನು ಕರಾಳ ಕಾನೂನಿನ ಅಡಿಯಲ್ಲಿ ಬಂಧಿಸಿ ಜೈಲಿಗಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಹಾಗೂ ಸ್ತುತಿ ಪಬ್ಲಿಕೇಷನ್ಸ್ ಆ?ಯಂಡ್ ಇನ್ಫರ್ಮೇಷನ್ ಟ್ರಸ್ಟ್ ನ ಅಧ್ಯಕ್ಷ ಅಬ್ದುಲ್ ರಝಾಕ್ ಕೆಮ್ಮಾರ ಮಾತನಾಡಿ, ಪ್ರಸ್ತುತ ಪಾಕ್ಷಿಕವು ೨೦೦೭ರಿಂದ ಸ್ತುತಿ ಪಬ್ಲಿಕೇಷನ್ ಅಂಡ್ ಇನ್ಫಾರ್ಮೇಷನ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿದೆ. ಪ್ರಸ್ತುತ ಪತ್ರಿಕೆಯನ್ನು ೨೦೦೭ರಲ್ಲಿ ಮಾಸಿಕ ರೂಪದಲ್ಲಿ ಹೊರತರಲಾಯಿತಾದರೂ ೨೦೦೯ರಲ್ಲಿ ಪಾಕ್ಷಿಕವಾಗಿ ಮೂಡಿ ಬಂತು ಎಂದರು.
ಡಿಜಿಟಲ್ ಯುಗದ ಬೇಡಿಕೆಗೆ ಅನುಗುಣವಾಗಿ ಪ್ರಸ್ತುತ ಪೋರ್ಟಲ್ ಅನ್ನು ೨೦೨೦ರ ಆಗಸ್ಟ್ ನಲ್ಲಿ ಪ್ರಾರಂಭಿಸಲಾಯಿತು ಮತ್ತು ಪ್ರಸ್ತುತ ಯೂಟ್ಯೂಬ್ ಚಾನೆಲ್ ಗೆ ೨೦೨೦ರ ಅಕ್ಟೋಬರ್ ನಲ್ಲಿ ಚಾಲನೆ ನೀಡಲಾಯಿತು. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಚಂದಾ ಅಭಿಯಾನವನ್ನು ನಡೆಸಲಾಗುತ್ತದೆ. ಈ ವರ್ಷ ಚಂದಾ ಅಭಿಯಾನ ಡಿಸೆಂಬರ್ ೧ರಿಂದ ೨೦ರವರೆಗೆ ರಾಜ್ಯಾದ್ಯಂತ ನಡೆಯಲಿದೆ. ಇದರ ಉದ್ಘಾಟನೆಯನ್ನು ಇಂದಿಲ್ಲಿ ನಡೆಸಲಾಗಿದೆ ಎಂದರು.
ಪ್ರಗತಿಪರ ಹೋರಾಟಗಾರ ಹಾಗೂ ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ಅನೀಸ್ ಪಾಷ, ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಎಲ್ಲೆಡೆ ಅರಾಜಕತೆ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸವನ್ನು ಮಾಧ್ಯಮ ಮಾಡಬೇಕು. ಮಾಧ್ಯಮ ಯಾವುದೇ ರಾಜಕೀಯ ಪಕ್ಷದ ಪರವಾಗಿ ನಿಲ್ಲದೆ ಸತ್ಯದ ಪರವಾಗಿ ನಿಲ್ಲಬೇಕು. ಸತ್ಯವನ್ನು ಹೊರತಂದು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ದಾವಣಗೆರೆಯ ನಗರವಾಣಿ ಪತ್ರಿಕೆಯ ಸಹ ಸಂಪಾದಕ ಬಿ.ಎನ್.ಮಲ್ಲೇಶ್ ಮಾತನಾಡಿ, ಪತ್ರಿಕೆಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಯಾವುದೇ ಪಂಥಗಳ ಪರವಾಗಿ ಕೆಲಸ ಮಾಡದೆ ಜನ ಪರವಾಗಿ ಕೆಲಸ ಮಾಡಬೇಕು. ಹಾಗಾದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.