ಕರ್ನಾಟಕ ರಾಜ್ಯೋತ್ಸವದಲ್ಲಿ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಕುರಿತ ನೃತ್ಯ ರೂಪಕ ಮನ ಸೆಳೆದ ಗುರುಕುಲ ಶಾಲೆಯ ವಿದ್ಯಾರ್ಥಿಗಳ ಪ್ರದರ್ಶನ
ದಾವಣಗೆರೆ : ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 69ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಗರದ ಗುರುಕುಲ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಕುರಿತ ನೃತ್ಯ ರೂಪಕ ನೋಡುಗರ ಮನ ಸೆಳೆಯಿತು.
ಕನ್ನಡ ನಾಡು, ನುಡಿ, ನೆಲ-ಜಲದ ಸೊಗಡನ್ನು ಪ್ರತಿಬಿಂಬಿಸುವ ನೃತ್ಯದ ಜೊತೆಗೆ ವಿಳಾಸ ಕೇಳುವ ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ದುರ್ಗಿ ಅವತಾರ ತಾಳಿದಾಗ, ಅತ್ಯಾಚಾರಕ್ಕೆ ಪ್ರಯತ್ನಿಸಿದ ವ್ಯಕ್ತಿಯ ಸಂಹಾರ ಮಾಡಿ ತನ್ನನ್ನು ತಾನು ರಕ್ಷಿಸಿಕೊಂಡ ಬಗ್ಗೆ ನೃತ್ಯ ರೂಪಕ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಅಲ್ಲದೇ, ನವದೆಹಲಿಯಲ್ಲಿ ವೈದ್ಯ ವಿದ್ಯಾರ್ಥಿನಿ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಅನೇಕ ಹೆಣ್ಣುಮಕ್ಕಳಿಗೆ ಶೋಷಣೆ ಮತ್ತು ಅತ್ಯಾಚಾರದ ಸಮಸ್ಯೆ ಎದುರಾಗುತ್ತಿರುವ ಸಂಗತಿಗಳು ನೆನಪಿಸಿದವು.
ಹೆಣ್ಣಿನ ರಕ್ಷಣೆ ಮತ್ತು ಗೌರವವನ್ನು ಈ ನೃತ್ಯವು ಪ್ರಸ್ತುತಪಡಿಸಿತು. ಹಿಂಸೆ ಹಾಗೂ ಶೋಷಿತ ಮಹಿಳೆಯ ಕಷ್ಟಗಳನ್ನು ಕಥಾರೂಪದಲ್ಲಿ ತೋರಿಸುತ್ತಾ, ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
ಈ ನೃತ್ಯವು ಮಹಿಳೆಯರು ಹೇಗೆ ಎಲ್ಲ ದಿಕ್ಕುಗಳಲ್ಲಿ ಪ್ರಗತಿಸಬಹುದೆಂಬ ವಿಶ್ವಾಸವನ್ನು ಬಿತ್ತರಿಸಿತು. ಹೆಣ್ಣು ಹಿಂಸೆ ಅನುಭವಿಸಿದರೂ ಮುನ್ನಡೆಯುವುದರಲ್ಲಿ ಶ್ರದ್ಧೆ ಇಟ್ಟು ನಿಲ್ಲಬೇಕು ಎಂಬ ಸಂದೇಶವನ್ನು ಸಾರಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿ ಉಮಾ ಪ್ರಶಾಂತ್ ಅವರುಗಳು ಗುರುಕುಲ ವಸತಿಯುತ ಶಾಲೆಯ ವಿದ್ಯಾರ್ಥಿಗಳ ಈ ನೃತ್ಯ ರೂಪಕವನ್ನು ಮೆಚ್ಚಿ ಪ್ರಶಸ್ತಿ ನೀಡಿ ಗೌರವಿಸಿದರು. ಈ ನೃತ್ಯಕ್ಕೆ ಪ್ರಥಮ ಸ್ಥಾನ ದೊರೆತಿದೆ.