ಕರ್ನಾಟಕ ರಾಜ್ಯ ಬೇಡ ಜಂಗಮ ಮಹಾಸಭಾದಿಂದ ಶಾಸಕರ, ಸಚಿವರ ತಿಥಿ ಮಾಡುವ ಅಣಕು ಪ್ರದರ್ಶ
ದಾವಣಗೆರೆ: ಬೇಡ ಜಂಗಮ ಜನಾಂಗವನ್ನು ಗುರಿಯಾಗಿಸಿಕೊಂಡು ಶಾಸಕರಾದ ಪ್ರಿಯಾಂಕ ಖರ್ಗೆ, ಡಾ.ಅನ್ನದಾನಿ, ಪಿ.ರಾಜೀವ್, ಲೋಕೋಪಯೋಗಿ ಸಚಿವ ಗೋವಿಂದ್ ಕಾರಜೋಳ ಇವರುಗಳು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು, ಕರ್ನಾಟಕ ರಾಜ್ಯ ಬೇಡ ಜಂಗಮ ಮಹಾಸಭಾದಿಂದ ಶಾಸಕರ, ಸಚಿವರ ತಿಥಿ ಮಾಡುವ ಅಣಕು ಪ್ರದರ್ಶ ಮಾಡುವ ಮೂಲಕ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಶಾಸಕರಾದ ಪ್ರಿಯಾಂಕ ಖರ್ಗೆ, ಡಾ.ಅನ್ನದಾನಿ, ಪಿ.ರಾಜೀವ್, ಲೋಕೋಪಯೋಗಿ ಸಚಿವ ಗೋವಿಂದ್ ಕಾರಜೋಳ ಅವರ ಭಾವಚಿತ್ರವನ್ನಿಟ್ಟು ತಿಥಿ ಮಾಡುವ ಮೂಲಕ ಅಣಕು ಪ್ರದರ್ಶನ ವಿನೂತನವಾಗಿ ಪ್ರತಿಭಟಿಸಿ, ನಂತರ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಮೂಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕುಡುಚಿ ಶಾಸಕ ಪಿ.ರಾಜೀವ್ ಸದನದ ಕಲಾಪದಲ್ಲಿ ಕೆಲವೂ ಶಾಸಕರೊಂದಿಗೆ ಸೇರಿ ಉಚ್ಛ ನ್ಯಾಯಾಲಯದ ಆದೇಶ ೧೮೦೧೨/೮೯ರಲ್ಲಿ ಕುತಂತ್ರದಿಂದ ಹೊರಡಿಸಿದ ಸುತ್ತೋಲೆಯನ್ನು ರದ್ದುಗೊಳಿಸಲಾಗಿದ್ದು, ಈ ಸುತ್ತೋಲೆಯನ್ನು ಸುಳ್ಳು ಮಾಹಿತಿ ಸದನಕ್ಕೆ ನೀಡಿ ಸದನದ ಗೌರವವನ್ನು ಹಾಳು ಮಾಡಿರುವುದು ಅಲ್ಲದೇ ಅದರ ಮೌಲ್ಯಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ರಾಜೀವ್ ಸದನದಲ್ಲಿ ಒಂದು ಜನಾಂಗವನ್ನು ಗುರಿಯಾಗಿಸಿಕೊಂಡು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದು, ಶಾಸಕರಾಗಲು ಅವರು ಅನರ್ಹರಾಗಿದ್ದಾರೆ. ಆದ್ದರಿಂದ ತಕ್ಷಣವೇ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೇಡ ಜಂಗಮ ಸಮಾಜಕ್ಕೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ೧೯೭೭ ಜುಲೈ ೨೭ರಿಂದ ಜಾರಿಗೆ ಬಂದಿರುವ ರಾಷ್ಟ್ರಪತಿಗಳ ಆದೇಶದಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜಂಗಮರು ವಾಸಿಸಿದ್ದ ನಿರ್ಬಂಧ ತೆಗೆದು ಹಾಕಿ, ರಾಜ್ಯಾದ್ಯಂತ ವಾಸವಾಗಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ, ಬೇಡ ಜಂಗಮರೆಂದು ಗುರುತಿಸಲು ಡಾ.ಯು.ಸೂರ್ಯನಾಥ ಕಾಮತ್ ಅವರು ಸಮಾಜ ಕಲ್ಯಾಣ ಇಲಾಖೆ ಆದೇಶದ ಮೇರೆಗೆ ಕುಲಶಾಸ್ತ್ರ ಅಧ್ಯಯನ ಮಾಡಿಸಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಬೇಡ ಜಂಗಮರನ್ನು ಗುರುತಿಸಿ, ಅವರ ವರದಿಯನ್ನು ಪಾಲಿಸಲು ಅದೇಶ ಮಾಡಲಾಗಿದೆ. ಆದರೆ, ಕೆಲವು ಕುತಂತ್ರಿ ರಾಜಕಾರಣಿಗಳು ದುರುದ್ದೇಶದಿಂದ ಬೇಡ ಜಂಗಮ ಜನಾಂಗವನ್ನು ಗುರಿಯಾಗಿಸಿಕೊಂಡು ಅಧಿಕಾರಿಗಳಿಗೆ ತೊಂದರೆ ಕೊಡುವುದಲ್ಲದೇ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದವರನ್ನು ಹೆದರಿಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲ ಜನಾಂಗದವರಿಗೆ ನ್ಯಾಯ ಒದಗಿಸಿದ್ದು, ಅವರ ನಿಲುವಿಗೆ ಬದ್ಧರಿಲ್ಲದ ಜನಪ್ರತಿನಿಧಿಗಳು ಜಂಗಮ ಜೋಳಿಗೆಗೆ ಕೈ ಹಾಕಿ, ತಿನ್ನುವ ರ್ದುಬುದ್ದಿ ನಿಲ್ಲಿಸಬೇಕು. ಅವರು ತಮ್ಮ ಜವಾಬ್ದಾರಿ ಅರಿತು ಸಮಾಜದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಹಾಸಭಾದ ಅರುಣ್ಕುಮಾರ್ ಜಡೀಮಠ್, ಜಿಲ್ಲಾಧ್ಯಕ್ಷೆ ದ್ರಾಕ್ಷಾಯಣಮ್ಮ ಟಿ.ಎಂ. ಹಾಲಶಂಕರ ಸ್ವಾಮಿ, ವಿಶ್ವಾರಾಧ್ಯ, ಅಕ್ಷತಾ, ರವಿಕುಮಾರ್ ಪೂಜಾರ್, ಅಶೋಕ್ ಸದಾಶಿವಯ್ಯ, ಕೆ.ಎಂ.ಕೊಟ್ರಯ್ಯ, ಮಲ್ಲಿಕಾರ್ಜುನಯ್ಯ, ರಾಜೇಶ್ವರಿ ಟಿ.ಎಂ.ಉಮೇಶ್, ಸುವರ್ಣಮ್ಮ ಶಂಕರಯ್ಯ, ಸುಜ್ಞಾನಮೂರ್ತಿ, ಚಂದ್ರಮ್ಮ, ಸಂತೋಷ್, ಹೆಚ್.ಎಂ.ಸುರೇಶ್ ಇಟಗಿ ಮತ್ತಿತರರು ಪಾಲ್ಗೊಂಡಿದ್ದರು.