ಅಪರೂಪದ ತಳಿ ಬಯಲು ಸೀಮೆಯ ಕೊಂಡುಕುರಿ
ದಾವಣಗೆರೆ; 18 ನೇ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಬೇಕೆಂದು ಜಿಂಕೆಯ ತದ್ರೂಪ ಹೊಂದಿರುವ ಬಯಲುಸೀಮೆ ಕೊಂಡುಕುರಿ ರಂಗಯ್ಯನದುರ್ಗ ಅರಣ್ಯದಲ್ಲಿ ಸಿಗುವ ನಗುಮೊಗದ ಪ್ರಾಣಿ ಕೊಂಡುಕುರಿ ರಂಗ ಈ ಭಾರಿಯ ಚುನಾವಣಾ ಜಾಗೃತಿಗೆ ಮ್ಯಾಸ್ಕಟ್ ಆಗಿ ಬಳಕೆ ಮಾಡಲಾಗಿದೆ. ಕೊಂಡುಕುರಿ ಓಟದ ತೇಜತೆಯ ರೀತಿಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ಗುರಿ ಹೊಂದಿದೆ.
ಮತದಾರರ ಜಾಗೃತಿ ಹೆಚ್ಚಿಸುವ ಮೂಲಕ ಮತದಾನವನ್ನು ದಾಖಲೆ ಪ್ರಮಾಣದಲ್ಲಿ ಹೆಚ್ಚಿಸಬೇಕೆನ್ನುವ ಪ್ರಯತ್ನ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ಪ್ರಮುಖ ಉದ್ದೇಶವಾಗಿದೆ. ಇತ್ತೀಚೆಗೆ ಏ.20 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಜಾಗೃತಿ ಮ್ಯಾಸ್ಕಟ್‍ನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ, ಚುನಾವಣಾ ವೀಕ್ಷಕರಾದ ಎಂ.ಲಕ್ಷ್ಮೀ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊಂಡುಕುರಿಯ ವಿಶೇಷ; ಬಯಲುಸೀಮೆ ಜಗಳೂರು ತಾಲ್ಲೂಕು ರಂಗಯ್ಯನದುರ್ಗ ಅಭಯಾರಣ್ಯ ಪ್ರದೇಶದಲ್ಲಿ ಕಂಡುಬರುವ ಅಪರೂಪದ ಜೀವ ವೈವಿಧ್ಯತೆಯ ನಾಲ್ಕು ಕೊಂಬಿನ ಕೊಂಡುಕುರಿ ಜಿಂಕೆಯಲ್ಲ, ಜಿಂಕೆಯಾಕಾರ ಹೊಂದಿದೆ. ಏಷ್ಯಾ ಖಂಡದಲ್ಲಿಯೇ ಅಪರೂಪದ ಜೀವಸಂಕುಲವಾಗಿದ್ದು ನಾಚಿಕೆ ಸ್ವಭಾವದ್ದಾಗಿದೆ. ಇದರ ಸಂತತಿಯನ್ನು ಸಂರಕ್ಷಣೆ ಮಾಡಲು ರಂಗಯ್ಯನದುರ್ಗ ಅರಣ್ಯವನ್ನು ಮೀಸಲಿರಿಸಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿಯೇ ಅಪರೂಪವಾದ ಕೊಂಡುಕುರಿ ಸೌಮ್ಯ ಪ್ರಾಣಿಗಳಲ್ಲಿ ಜಿಲ್ಲೆಯ ಐಕಾನ್ ಎಂದೇ ಕರೆಯಬಹುದಾಗಿದ್ದು ಚುನಾವಣೆಯಲ್ಲಿ ಜಿಲ್ಲೆಯ ಐಕಾನ್ ಆಗಿ ಚುನಾವಣಾ ಸೌಮ್ಯತೆ ಹೆಚ್ಚಿಸಬಹುದೆಂಬ ಸಂದೇಶದೊಂದಿಗೆ ಮ್ಯಾಸ್ಕಟ್ ಆಗಿ ಬಳಕೆ ಮಾಡಲಾಗಿದೆ ಎಂದು ಸ್ವೀಪ್ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ಅಭಿಪ್ರಾಯವಾಗಿದೆ.