ಅಪರಿಚಿತನ ಫೋನ್ ಕರೆ! ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 97 ಸಾವಿರ ಲೂಟಿ
ದಾವಣಗೆರೆ: ತಾನು ಬ್ಯಾಂಕ್ ಮ್ಯಾನೇಜರ್, ನಿಮ್ಮ ಖಾತೆಗೆ ಕೆವೈಸಿ ಅಪ್ಡೇಟ್ ಮಾಡಬೇಕು, ನಿಮ್ಮ ಬ್ಯಾಂಕ್ ಖಾತೆಯ ನಂಬರ್, ಎಟಿಎಂ ಕಾರ್ಡ್ ನಂಬರ್ ಮಾಹಿತಿ ಒದಗಿಸಿ ಎಂದು ಸೇರಿದಂತೆ ವಿವಿಧ ಕಾರಣ ಹೇಳುವ ಅಪರಿಚಿತ ವ್ಯಕ್ತಿಗಳ ಕರೆಗಳನ್ನು ಸ್ವೀಕರಿಸಿ ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ಸುಖಾಸುಮ್ಮನೆ ಕಳೆದುಕೊಳ್ಳಬೇಡಿ. ಇಂಥದ್ದೆ ಒಂದು ಘಟನೆ ಮೇ.22,2022ರಂದು ದಾವಣಗೆರೆ ನಗರದಲ್ಲಿ ನಡೆದಿದೆ.
ದಾವಣಗೆರೆಯ ಕುವೆಂಪು ನಗರದ ವಾಸಿ ನಿವೃತ್ತ ಶಿಕ್ಷಕ ಶರಣಪ್ಪ ಎಂಬುವರಿಗೆ ಯಾರೋ ಅಪರಿಚಿತ ವ್ಯಕ್ತಿ ಆತನ ಮೊಬೈಲ್ ನಂಬರ್ 7029168575 ನಿಂದ ಕರೆ ಮಾಡಿ, ತಾನು ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡು, ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಅಪ್ಡೇಟ್ ಮಾಡಿರುವುದಿಲ್ಲ, ಹಾಗಾಗಿ ನಿಮ್ಮ ಕೆನರಾ ಬ್ಯಾಂಕ್ ಖಾತೆ ಬ್ಲಾಕ್ ಆಗುತ್ತಿದ್ದು, ಬ್ಯಾಂಕ್ ಖಾತೆ ಮರು ಚಾಲನೆ ಮಾಡಲು ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಕೊಡಿ ಎಂದು ಕೇಳಿದ್ದಾನೆ.
ಇದನ್ನು ಕಿಂಚಿತ್ತು ಯೋಚಿಸದೆ ಶರಣಪ್ಪ ಅವರು ಬ್ಯಾಂಕ್ ಅಧಿಕಾರಿ ಎಂದು ನಂಬಿ ಅವರ ಕೆನರಾ ಬ್ಯಾಂಕ್ ಖಾತೆ ನಂಬರ್, ಎಟಿಎಂ ಕಾರ್ಡ್ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಶರಣಪ್ಪ ಅವರ ಫೋನ್ ನಂಬರ್ಗೆ ಒಟಿಪಿ ನಂಬರ್ವೊ0ದು ಬಂದಿದ್ದು, ಆ ಒಟಿಪಿ ನಂಬರ್ ಅನ್ನು ತಾನು ಬ್ಯಾಂಕ್ ಅಧಿಕಾರಿ ಎಂದು ಕರೆ ಮಾಡಿದ್ದ ವ್ಯಕ್ತಿಗೆ ನೀಡಿದ್ದಾರೆ.
ಕೆಲ ಸಮಯದ ನಂತರ ಶರಣಪ್ಪ ಅವರ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ರೂ. 97 ಸಾವಿರ ಹಣ ಕಡಿತವಾದ ಬಗ್ಗೆ ಪೋನ್ ನಂಬರ್ಗೆ ಸಂದೇಶ ಬಂದಿದೆ. ಆಗ ಎಚ್ಚೆತ್ತ ಶರಣಪ್ಪ ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ನನ್ನ ಬ್ಯಾಂಕ್ ಖಾತೆಯಿಂದ ಹಣ ಕಡಿತವಾದ ಬಗ್ಗೆ ವಿಚಾರಿಸಿದಾಗ ಆತ ನಿಮ್ಮ ಹಣ ಪುನ: ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ ಎಂದು ಹೇಳಿ ಪೋನ್ ಕರೆ ಕಟ್ ಮಾಡಿದ್ದಾನೆ.
ಮತ್ತೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವುದಾಗಿ ಹೇಳಿ ನಂತರ ಸತಾಯಿಸಿದ ಮೇಲೆ ಇದು ಮೋಸದ ಜಾಲ ಎಂದು ಎಚ್ಚರಗೊಂಡ ಶರಣಪ್ಪ ಮೇ. 23ರಂದು ದಾವಣಗೆರೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಠಾಣೆ ಗುನ್ನೆ ನಂ. 45/2022 ಕಲಂ. 66 (ಸಿ) (ಡಿ) ಐಟಿ ಆಕ್ಟ್ & 419, 420 ಐಪಿಸಿ ರೀತ್ಯಾ ಪ್ರಕರಣದಡಿ ತನಿಖೆ ಕೈಗೊಂಡಿದ್ದಾರೆ.
garudavoice21@gmail.com 9740365719