ಸರ್ಕಾರದ ವಿರುದ್ದ ಉಪವಾಸದ ಅಸ್ತ್ರ: ಕಬ್ಬು ಬೆಳೆಗಾರರಿಂದ ಹೋರಾಟದ ಅಖಾಡದಲ್ಲಿ ಹೈಡ್ರಾಮಾ

ಬೆಂಗಳೂರು: ಕಬ್ಬಿಗೆ ಸೂಕ್ತ ಬೆಲೆ ನಿಗದಿಗೆ ಒತ್ತಾಯಿಸಿ ಕಳೆದ ತಿಂಗಳಿನಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರು ಇದೀಗ ಉಪವಾಸದ ಅಸ್ತ್ರ ಪ್ರಯೋಗಿಸಿದ್ದಾರೆ. ಸರದಿ ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಅನ್ನದಾತರಿಗೆ ಭಾರೀ ಬೆಂಬಲ ಸಿಕ್ಕಿದೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ 35ನೇ ದಿನವಾದ ಇಂದೂ ಮುಂದುವರಿಯಿತು. ಫ್ರೀಡಂ ಪಾರ್ಕ್ ಬಳಿ ನಡೆಯುತ್ತಿರುವ ಹೋರಾಟದಲ್ಲಿ ರೈತ ನಾಯಕರನೇಕರು ಭಾಗಿಯಾದರು.
12 ದಿನಗಳ ಹಿಂದೆ ಧರಣಿ ನಿರತ ರೈತ ಮುಖಂಡರ ಜೊತೆ ಮಾತುಕತೆ ನಡೆಸಿ ಕಬ್ಬಿನ ದರ ಎರಿಕೆಯ ಭರವಸೆ ನೀಡಿದ್ದ ಮುಖ್ಯಮಂತ್ರಿಯವರು ಈವರೆಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ, ಕೇವಲ ಮಾತಿನ ಭರವಸೆ ಬೇಡ ನ್ಯಾಯಸಮ್ಮತ ಬೆಲೆ ನಿಗದಿಪಡಿಸಬೇಕು ಎಂದು ಸರದಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದೇವೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಇಂದು ಐವರು ರೈತರು ಇಂದು ನಿರಶನ ಕೈಕೊಂಡರು. ಬೆಳಗಾವಿಯ ಸುರೇಶ್ ಮ.ಪಾಟೀಲ್, ಕಲಘಟಗಿಯ ಉಳುವಪ್ಪ ಬಳಗೇರೆ, ಧಾರವಾಡದ ಪರಶುರಾಮ್ ಎತ್ತಿನಗುಡ್ಡ, ಬ್ಯಾಂಕ್ ರಾಮಣ್ಣ,ಹೂಳೆಯಫ್ಫ ಜಿವಣ್ಣನವರ ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡರು. ಈ ಹೋರಾಟದ ವೇದಿಕೆ ಬಳಿ ಜಮಾಯಿಸಿದ್ದ ಇತರ ರೈತರು ಧರಣಿ ನಡೆಸಿದರು.
ಅಧಿಕಾರಿಗಳ ನಿರ್ಲಕ್ಷ್ಯ: ರೈತರ ಆಕ್ರೋಶ:
ಉಪವಾಸ ನಿರತ ರೈತರು ಸಂಜೆ 6 ಗಂಟೆ ಹೊತ್ತಿಗೆ ಬಳಲಿದರು. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಬಂದೋಬಸ್ತ್ ನಿರತ ಪೊಲೀಸರು ಪಕ್ಕದಲ್ಲಿದ್ದ ಆಂಬುಲೆನ್ಸನ್ನು ತರಿಸಿದರು. ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್‌ನಲ್ಲಿನ ಕರ್ತವ್ಯ ನಿರತ ಸಿಬ್ಬಂದಿಯು ರೈತರ ರಕ್ತ ಪರೀಕ್ಷೆ ಮಾಡಲು ಮುಂದಾದರು. ಈ ವೇಳೆ ಕಿಟ್ ಬಗ್ಗೆ ಅನುಮಾನಗೊಂಡ ರೈತ ಮುಖಂಡರು ಅದನ್ನು ಪರಿಶೀಲಿಸಿದಾಗ ಪರೀಕ್ಷೆಯ ಕಿಟ್‌ನ ಎಕ್ಸ್‌ಪೈರಿ ಡೇಟ್ ಮುಗಿದಿರುವ ಸಂಗತಿ ಗೊತ್ತಾಯಿತು..
ಈ ನಿರ್ಲಕ್ಷ್ಯ ಬಗ್ಗೆ ರೈತ ನಾಯಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೇ ಆರೋಗ್ಯ ಸಿಬ್ಬಂದಿ ಬದಲಿ ಹೊಸ ಕಿಟ್ ತಂದು ಪರೀಕ್ಷೆ ಮಾಡುವ ಪ್ರಯತ್ನಕ್ಕಿಳಿದರು. ಆಗಲೂ ಕೆಲವು ಲೋಪದೋಷಗಳು ಕಂಡು ಬಂದಾಗ ರೈತರು ಯಾವುದೇ ಚಿಕಿತ್ಸೆಗೆ ಒಪ್ಪದೆ ಆರೋಗ್ಯ ಸಿಬ್ಬಂದಿಯನ್ನು ವಾಪಸ್ ಕಳಿಸಿದ ಪ್ರಸಂಗವೂ ನಡೆಯಿತು.
ಈ ಮಧ್ಯೆ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಬಗ್ಗೆ ಆಕ್ರೋಶ ಹೊರಹಾಕಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಮುಖ್ಯಮಂತ್ರಿಗಳು ವಚನಭ್ರಷ್ಟರಾಗಬಾರದು. ರೈತರ ಹಿತ ರಕ್ಷಣೆಗೆ ಬದ್ಧ ಎನ್ನುತ್ತಾ ವಿಳಂಬ ಮಾಡುತ್ತಿರುವ ನಡೆಯು ಕಬ್ಬು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ ಎಂದರು. ನಾವು ಸರ್ಕಾರದ ಖಜಾನೆಯಿಂದ ಹಣ ಕೇಳ್ತಾ ಇಲ್ಲ, ಎಂಬುದನ್ನು ಸಿಎಂ ಅರಿತುಕೊಳ್ಳಲಿ ಎಂದು ಕುರುಬೂರು ಶಾಂತಕುಮಾರ್ ತರಾಟೆಗೆ ತೆಗೆದುಕೊಂಡರು.