ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್‌ ಪೀಠಕ್ಕೆ ಆಮ್‌ ಆದ್ಮಿ ಪಾರ್ಟಿ ಆಗ್ರಹ

ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್‌ ಪೀಠಕ್ಕೆ ಆಮ್‌ ಆದ್ಮಿ ಪಾರ್ಟಿ ಆಗ್ರಹ

ಬೆಂಗಳೂರು :ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್‌ ಪೀಠ ಸ್ಥಾಪನೆ ಕುರಿತು ಬೇರೆ ಪಕ್ಷಗಳು ಪ್ರತಿಕ್ರಿಯೆ ನೀಡದಿದ್ದರೆ, ಒಂದು ವಾರದಲ್ಲಿ ಆಮ್‌ ಆದ್ಮಿ ಪಾರ್ಟಿ ಸರ್ವ ಪಕ್ಷ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಪಕ್ಷದ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ ಹೇಳಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬ್ರಿಜೇಶ್‌ ಕಾಳಪ್ಪ, “ಬೆಂಗಳೂರಿನ ಗಾಲ್ಫ್‌ ಕ್ಲಬ್‌ಗೆ ಸೇರಿದ 80 ಎಕರೆ ಜಾಗದಲ್ಲಿ ಸುಪ್ರೀಂ ಕೋರ್ಟ್‌ ಪೀಠ ಸ್ಥಾಪನೆಯಾಗಲಿದೆ ಎಂಬ ವದಂತಿಯು ಕೆಲ ವರ್ಷಗಳ ಹಿಂದೆ ವಾಟ್ಸಪ್‌ನಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು, ದೆಹಲಿಯ ಹೊರಗೆ ಸುಪ್ರೀಂ ಕೋರ್ಟ್‌ ಪೀಠ ಸ್ಥಾಪಿಸುವ ಅವಶ್ಯಕತೆಯಿಲ್ಲವೆಂದು 2010ರಲ್ಲೇ ಸುಪ್ರೀಂ ಕೋರ್ಟ್‌ ನಿರ್ಣಯ ತೆಗೆದುಕೊಂಡಿರುವುದಾಗಿ ತಿಳಿಸಿದ್ದರು. ಆದರೆ ಮೊನ್ನೆ ಮಾರ್ಚ್‌ 26ರಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ರವರು ಚೆನ್ನೈನಲ್ಲಿ ಸುಪ್ರೀಂ ಕೋರ್ಟ್‌ ಪೀಠ ಸ್ಥಾಪಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಧನಂಜಯ್‌ ಚಂದ್ರಚೂಡ್‌ ಹಾಗೂ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಸಮ್ಮುಖದಲ್ಲೇ ಎಂ.ಕೆ.ಸ್ಟಾಲಿನ್‌ ಈ ಬೇಡಿಕೆ ಇಟ್ಟಿದ್ದಾರೆ. ಇದಾಗಿ ಎರಡು ದಿನಗಳಾದರೂ ಕರ್ನಾಟಕದ ಯಾವುದೇ ಜನಪ್ರತಿನಿಧಿ ಇದಕ್ಕೆ ಪ್ರತಿಕ್ರಿಯಿಸದಿರುವುದು ದುರದೃಷ್ಟಕರ” ಎಂದು ಹೇಳಿದರು.

ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್‌ ಪೀಠಕ್ಕೆ ಆಮ್‌ ಆದ್ಮಿ ಪಾರ್ಟಿ ಆಗ್ರಹ

“ಕರ್ನಾಟಕದ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್‌ ಪೀಠ ಸ್ಥಾಪಿಸುವ ವಿಚಾರವನ್ನು ಹಗುರವಾಗಿ ಪರಿಗಣಿಸಿವೆ. ಆದರೆ ಆಮ್‌ ಆದ್ಮಿ ಪಾರ್ಟಿಯು ಮುಂದೆ ಬಂದು ಪ್ರತಿಕ್ರಿಯೆ ನೀಡುತ್ತಿದೆ. ಅವು ಮಲಗಿರುವ ಸಂದರ್ಭದಲ್ಲಿ ನಾವು ಎಚ್ಚರವಾಗಿದ್ದೇವೆ. ಕಾವೇರಿ ವಿಚಾರದಲ್ಲೂ ಆ ಮೂರು ಪಕ್ಷಗಳು ಇದೇ ರೀತಿಯ ನಿರ್ಲಕ್ಷ್ಯ ತೋರಿದ್ದವು. ಇಂತಹ ವಿಚಾರಗಳಲ್ಲಿ ತಮಿಳುನಾಡು ಸದಾ ಮುಂದಿದ್ದು, ಕರ್ನಾಟಕ ಕೂಡ ಮುಂದೆ ಬರಬೇಕಿದೆ. ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್‌ ಪೀಠ ಸ್ಥಾಪಿಸುವ ಕುರಿತು ಬೇರೆ ಪಕ್ಷಗಳು ಒಂದು ವಾರದೊಳಗೆ ಪ್ರತಿಕ್ರಿಯೆ ನೀಡಬೇಕು. ಇಲ್ಲದಿದ್ದರೆ ಆಮ್‌ ಆದ್ಮಿ ಪಾರ್ಟಿಯೇ ಸರ್ವ ಪಕ್ಷ ಸಭೆ ನಡೆಸಿ, ಈ ಕುರಿತು ಚರ್ಚಿಸಲಿದೆ” ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ರಾಜೇಂದ್ರ, ಕಾರ್ತಿಕ್‌ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!