ಬಹುಭಾಷಾ ನಟಿ ‘ಅಭಿನಯ ಶಾರದೆ’ ನಟಿ ಜಯಂತಿ ಇನ್ನಿಲ್ಲ

ಬೆಂಗಳೂರು: ಬಹುಭಾಷಾ ನಟಿ, ಕನ್ನಡ ಚಿತ್ರರಂಗದ ಮೇರು ಕಲಾವಿದೆ ಜಯಂತಿ ಅವರ ನಿಧನಕ್ಕೆ ರಾಜ್ಯಾದ್ಯಂತ ತೀವ್ರ ಸಂತಾಪ ಸೂಚಿಸಿದ್ದಾರೆ.
ತಮ್ಮ ಮನೋಜ್ಞ ನಟನೆಯಿಂದ ‘ಅಭಿನಯ ಶಾರದೆ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ನಟಿ ಜಯಂತಿ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ತಾವು ಅಭಿನಯಿಸುತ್ತಿದ್ದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುತ್ತಿದ್ದ ಜಯಂತಿ ಅವರು ಬೆಳ್ಳಿ ತೆರೆಯ ಸ್ವರ್ಣ ಕಮಲದಂತಿದ್ದರು ಎಂದು ಶಿವಕುಮಾರ್ ಅವರು ಬಣ್ಣಿಸಿದ್ದಾರೆ.
1960ರ ದಶಕದಿಂದ ಕನ್ನಡ, ತೆಲುಗು, ತಮಿಳು, ಮರಾಠಿ ಸೇರಿದಂತೆ ಹಲವು ಭಾಷೆಗಳ ಸುಮಾರು 500 ಚಿತ್ರಗಳಲ್ಲಿ ಅಭಿನಯಿಸಿದ ಜಯಂತಿ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಕನ್ನಡ ಚಿತ್ರರಂಗದಲ್ಲಂತೂ ತಮ್ಮದೇ ಆದ ಶೈಲಿಯಿಂದ ಬೆರಗು ಮೂಡಿಸಿದ್ದರು. ಜೇನುಗೂಡು, ಮಂತ್ರಾಲಯ ಮಹಾತ್ಮೆ, ಬಹದ್ದೂರ್ ಗಂಡು, ನಾಗರಹಾವು, ಎಡಕಲ್ಲು ಗುಡ್ಡದ ಮೇಲೆ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿನ ಅವರ ಪಾತ್ರ ಅಚ್ಚಹಸುರಾಗಿದೆ.
ಡಾ. ರಾಜಕುಮಾರ್ ಅವರಿಂದ ಹಿಡಿದು ತಮಿಳಿನ ಎಂ.ಜಿ. ರಾಮಚಂದ್ರನ್, ತೆಲುಗಿನ ಎನ್.ಟಿ. ರಾಮರಾವ್ ಸೇರಿದಂತೆ ದಕ್ಷಿಣ ಭಾರತದ ಮಹಾನ್ ನಟರಿಗೆ ನಾಯಕಿಯಾಗಿ ಮಿಂಚು ಹರಿಸಿದ್ದವರು ನಟಿ ಜಯಂತಿ ಅವರು. ತಮ್ಮ ಕಲಾ ಸೇವೆಯಿಂದ ರಾಜ್ಯ ಪ್ರಶಸ್ತಿ ಸೇರಿದಂತೆ, ಫಿಲಂ ಫೇರ್, ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಯಂತಿ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗದ ಮತ್ತೊಂದು ಧ್ರುವತಾರೆ ಮರೆಯಾಗಿದೆ. ಅವರು ನಮ್ಮನ್ನು ಅಗಲಿದ್ದರೂ ಅವರ ಚಿತ್ರಗಳ ಮೂಲಕ ಸದಾ ಜೀವಂತವಾಗಿರುತ್ತಾರೆ.
ಜಯಂತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ.