ಆಕಸ್ಮಿಕ ಬೆಂಕಿ.! ಜರ್ಮನಿಯಲ್ಲಿ ದಾವಣಗೆರೆ ಎಂಜಿನಿಯರ್ ಸಾವು.!
ದಾವಣಗೆರೆ: ಆ ದಂಪತಿಗಳು ಶಿಕ್ಷಕರು, ಹಲವು ಮಕ್ಕಳನ್ನು ಉನ್ನತ ಹುದ್ದೆಗೆ ಕಳುಹಿಸಿ, ಅವರ ಬೆಳವಣಿಗೆಯನ್ನು ಕಣ್ತುಂಬಾ ನೋಡಿ ಖುಷಿ ಪಟ್ಟವರು..ಆದ್ರೆ ಇಂದು ಅದೇ ಕಣ್ಣಿನ ಅಂಚಿನಲ್ಲಿ ಕಣ್ಣೀರಿನ ಧಾರೆ ಹರಿಯುತ್ತಿದೆ…ಇದಕ್ಕೆ ಕಾರಣವೂ ಇದೆ…
ಉನ್ನತ ಹುದ್ದೆಯಲ್ಲಿ ತನ್ನ ಮಗ ಇರಬೇಕು, ನಾವು ಕಷ್ಟಪಟ್ಟಿದ್ದು ಸಾಕು, ನನ್ನ ಮಕ್ಕಳು ಕಷ್ಟಪಡಬಾರದೆಂದು ಉನ್ನತ ವ್ಯಾಸಂಗಕ್ಕೆ ಜರ್ಮನಿಗೆ ಕಳಿಸಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಮೊಬೈಲ್ ಸ್ಫೋಟಗೊಂಡು ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಮಗ ಮೃತಪಟ್ಟಿದ್ದಾನೆ.
ದಾವಣಗೆರೆ ಸರಸ್ವತಿ ನಗರದ ನಿವಾಸಿ ಶಿಕ್ಷಕ ದಂಪತಿ ರೇವಣಸಿದ್ದಪ್ಪ ಹಾಗೂ ಇಂದಿರಮ್ಮ ಅವರ ಪುತ್ರ ಸಂತೋಷ್ (30) ಮೃತಪಟ್ಟ ಯುವಕ.
ಮೃತ ಸಂತೋಷ್ ಜರ್ಮನಿಯ ಚೆಮ್ನಿಟ್ಜ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಎಂಟೆಕ್ ವಿದ್ಯಾಭ್ಯಾಸ ಮಾಡಲು 2017ರಲ್ಲಿ ತೆರಳಿದ್ದ. ನಂತರ ಕೆಲ ದಿನಗಳ ಹಿಂದಷ್ಟೇ ದಾವಣಗೆರೆಯಿಂದ ಜರ್ಮನಿಗೆ ತೆರಳಿದ್ದ ಸಂತೋಷ್, ಕೇಮ್ನಿಟ್ಜ್ ನಗರದಲ್ಲಿ ವಾಸವಿದ್ದ ಎಂದು ತಿಳಿದು ಬಂದಿದೆ.
ನವೆಂಬರ್ 30ರಂದು ತಡರಾತ್ರಿ ಯುವಕನಿದ್ದ ರೂಮಿನಲ್ಲಿ ಮೊಬೈಲ್ ಸ್ಫೋಟಗೊಂಡು ಬೆಳಗ್ಗೆ ಶಾರ್ಟ್ ಸರ್ಕ್ಯೂಟ್ ಆಗಿದೆ ಎಂದು ಹೇಳಲಾಗಿದ್ದು, ಈ ಸಂದರ್ಭದಲ್ಲಿ ಬೆಂಕಿ ಹತ್ತಿ ಅಪಾರ್ಟ್‌ಮೆಂಟ್‌ನ 6ನೇ ಮಹಡಿಯಲ್ಲಿ ದಟ್ಟ ಹೊಗೆ ಹಾಗೂ ಬೆಂಕಿ ಕಂಡುಬಂದಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದರು. ಆದರೆ ಅಷ್ಟೋತ್ತಿಗಾಗಲೇ ಸಂತೋಷ್ ಸುಟ್ಟು ಕರಕಲಾಗಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಂತೋಷ್ ಸಾವಿನ ಬಗ್ಗೆ ಅಲ್ಲಿನ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸಂತೋಷ್ ಮೃತಪಟ್ಟ 16ನೇ ದಿನಕ್ಕೆ ಮೃತದೇಹ ತವರಿಗೆ ರವಾನೆಯಾಗಿದೆ. ದಾವಣಗೆರೆ ಸರಸ್ವತಿ ನಗರದ ನಿವಾಸದಲ್ಲಿ ಗುರುವಾರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಡಿ.16 ಕ್ಕೆ ವಿಜಯನಗರ ಜಿಲ್ಲೆಯ ಸ್ವಗ್ರಾಮ ಪುಣಬಘಟ್ಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಂತೋಷ್ ಈಸ್ಟ್ ಜರ್ಮನಿಯಲ್ಲಿ ವಾಸವಾಗಿದ್ದು, ಏನಾದರೂ ಸಾಧಿಸಬೇಕೆಂಬ ಛಲದ ಹಿನ್ನೆಲೆಯಲ್ಲಿ ವಿದೇಶಕ್ಕೆ ಹಾರಿದ್ದರು..ತುಮಕೂರಿನ ಎಸ್ ಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಎಲೆಕ್ಟ್ರಾನಿಕ್ ಮಾಡಿದ್ದ ಸಂತೋಷ್ ಮೂರು ವರ್ಷಗಳ ಕಾಲ ಬೆಂಗಳೂರಿನ ಸಾಫ್ಟವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು..ಕೊರೊನಾ ಬಳಿಕ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು ..ಹೀಗಿರುವಾಗ ಎಂಟೆಕ್ ಮಾಡಲು ಜರ್ಮನಿಗೆ ಹೋಗಿದ್ದರು..ಆದರೆ ಅಷ್ಟೊರೊಳಗೆ ಜವರಾಯ ಸಂತೋಷ್ ರನ್ನು ತನ್ನ ಮಡಿಲಿಗೆ ಇರಿಸಿಕೊಂಡಿದ್ದ.
ಬ್ಯಾಕ್ ಟು ಬ್ಯಾಕ್ ಸಾವು : ಸಂತೋಷ್ ತಂದೆಗೆ ಇಬ್ಬರು ಗಂಡು ಮಕ್ಕಳಿದ್ದರು..ಆದರೆ ಈಗ ಇಬ್ಬರು ಮಕ್ಕಳು ಇಲ್ಲವಾಗಿದ್ದಾರೆ…ಮೊದಲ ಮಗ 2016 ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ..ಇದಾದ ಬಳಿಕ ಇದ್ದೊಬ್ಬ ಮಗ ಸಂತೋಷ್ ಕುಟುಂಬ ನಿರ್ವಹಣೆ ಮಾಡುತ್ತಿದ್ದರು..ಆದರೆ ಅಷ್ಟೊರೊಳಗೆ ಈ ದುರ್ಘಟನೆ ನಡೆದಿದ್ದು, ಪೋಷಕರು ಈಗ ಅನಾಥರಾಗಿದ್ದಾರೆ….