ದಾವಣಗೆರೆ ಪಾಲಿಕೆಯಲ್ಲಿ ಕಂಪ್ಯೂಟರ್ ಆಪರೇಟರ್ ಗಳಿಗೆ ಸಂಬಳ ನೀಡಲು ಸಾರ್ವಜನಿಕರಿಂದ ಹಣ ವಸೂಲಿ ಆರೋಪ.?
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯ ಶಾಖೆಯಿಂದ ಸಾರ್ವಜನಿಕರಿಗೆ ನೀಡಲಾಗುವ ಸೌಲಭ್ಯಗಳಾದ ಖಾತೆ ಬದಲಾವಣೆ ಹಾಗು ಇ ಸ್ವತ್ತುಗಳ ಸೌಲಭ್ಯಗಳನ್ನು ನೀಡಲು ತುಂಬಾ ವಿಳಂಬ ಮಾಡಲಾಗುತ್ತಿದೆ ಎಂದು ದಾವಣಗೆರೆ ನಾಗರಿಕರು ಪಾಲಿಕೆ ವಿರುದ್ದ ಆರೋಪ ಮಾಡುತ್ತಿದ್ದಾರೆ.
ಪಾಲಿಕೆಯ ಮಾನದಂಡಗಳ ಅನ್ವಯ ಸಾರ್ವಜನಿಕರು ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿದರೂ, ನಿಗದಿತ ಸಮಯದಲ್ಲಿ ಅರ್ಜಿಯನ್ನು ವಿಲೇವಾರಿ ಮಾಡದೆ, ಸಮಯದ ಪರಿಮಿತಿಯಲ್ಲಿ ಕೆಲಸಗಳನ್ನು ಮಾಡದೆ, ಹಣವನ್ನು ನೀಡಿದರೆ ಮಾತ್ರ ಕೆಲಸ ಆಗುತ್ತದೆ ಎಂಬ ವಾತಾವರಣವನ್ನು ಸೃಷ್ಟಿಸಿದ್ದಾರಂತೆ. ಕಂಪ್ಯೂಟರ್ ಆಪರೇಟರ್ ಗಳ ಸಂಬಳ ನೀಡಬೇಕೆಂದು ಸಾರ್ವಜನಿಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ( ಪಾಲಿಕೆಯಿಂದ ಕಂಪ್ಯೂಟರ್ ಆಪರೇಟರ್ ಗಳಿಗೆ ಸಂಬಳ ನೀಡುವುದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವುದು ಯಾಕೆ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ…?)
ಹಣ ನೀಡಿದವರಿಗೆ ಹಾಗೂ ಮಧ್ಯವರ್ತಿಗಳ ಮುಖಾಂತರ ಬಂದ ಅರ್ಜಿಗಳಿಗೆ ಒಂದು ವಾರದೊಳಗೆ ಇ- ಸ್ವತ್ತ ನೀಡುತ್ತಾರೆ. ಸಾರ್ವಜನಿಕರು ನೇರವಾಗಿ ಸಲ್ಲಿಸಿದ ಅರ್ಜಿಗಳನ್ನು ವಿಳಂಬ ಮಾಡುವ ಮೂಲಕ, ಅರ್ಜಿಗಳನ್ನು ಕಳೆದು ಹಾಕುವ ಮೂಲಕ, ಹಿರಿಯ ಅಧಿಕಾರಿಗಳ ಲಾಗಿನ್ ನಲ್ಲಿ ಹತ್ತು ಹದಿನೈದು ದಿನಗಳವರೆಗೂ ಅರ್ಜಿ ಫಾರ್ವರ್ಡ್ ಮಾಡದೆ, ಕಂಪ್ಯೂಟರ್ ಆಪರೇಟರ್ ಹಾಗೂ ಕಚೇರಿ ಸಿಬ್ಬಂದಿ ಮುಖಾಂತರ ಹಣದ ಬೇಡಿಕೆಯನ್ನು ಇಡುತ್ತಾರೆ ಎನ್ನಲಾಗಿದೆ. ನಿಮ್ಮದು ಆಫ್ಲೈನ್ ಅರ್ಜಿ ಅಂತ ಹೇಳಿ ಕಪಾಟಿನ ಒಳಗಡೆ ಇಟ್ಟು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರಂತೆ.
ನೇರವಾಗಿ ಬಂದ ಅರ್ಜಿಗಳಿಗೆ ವಿಶೇಷ ಸ್ಥಾನಮಾನ ಅಂದರೆ ಮಾಲಿಕರ ಹೆಸರು, ಅಳತೆ, ಚಕ್ಕಬಂದಿ, ವಿಳಾಸಗಳನ್ನು ತಪ್ಪು ತಪ್ಪಾಗಿ ಮುದ್ರಿಸಿ ಮತ್ತೊಮ್ಮೆ ತಿದ್ದುಪಡಿ ಮಾಡಿಸಲು ಸಾರ್ವಜನಿಕರು ಪಾಲಿಕೆಗೆ ಅಲೆಯುವಂತೆ ಮಾಡುತ್ತಾರೆ ಎನ್ನಲಾಗಿದೆ. ಈ ಎಲ್ಲಾ ಲೋಪ ದೋಷಗಳನ್ನು ಸರಿಪಡಿಸಲು ಪಾಲಿಕೆಯ ಎಲ್ಲಾ ಸೌಲಭ್ಯಗಳನ್ನು ಸಕಾಲದ ವ್ಯಾಪ್ತಿಗೆ ತರಲು, ಹಾಗೂ ಅರ್ಜಿಯ ಹಿರಿತನವನ್ನು ಪರಿಗಣಿಸಿ ಮತ್ತು ಅರ್ಜಿ ನೀಡಿದ ದಿನಾಂಕದಿಂದ ನಿಗದಿತ ಸಮಯದ ಒಳಗೆ ಅರ್ಜಿಯನ್ನು ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಪಾಲಿಕೆ ಅಧಿಕಾರಿಗಳಿಗೆ ವಿನಂತಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.