ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಸ್ಪರ್ಧೆ

ಹಿರಿಯೂರು :ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೇರೂರಿರುವ ಬ್ರಷ್ಟಾಚಾರದ ಬೇರುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿ, ನಾಡಿನ ಯುವ ಸಮುದಾಯವನ್ನು ಸಂಘಟಿಸಿ ಒಂದು ಸಶಕ್ತ ಕನ್ನಡ ಪಡೆ ಸಾಹಿತ್ಯ ಪರಿಷತ್ತನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗಿ ನಿಲ್ಲುವ ಹಿತದೃಷ್ಟಿಯಿಂದ ಈ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂಬುದಾಗಿ ಅಣ್ಣಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಬ್ರಷ್ಟಾಚಾರ ವಿರೋಧಿ ಮತ್ತು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಈ ಕನ್ನಡ ಸಾಹಿತ್ಯ ಪರಿಷತ್ತನ್ನು ಬರೀ ಒಂದು ಸಂಸ್ಥೆಯಾಗಿ ನೋಡದೇ ಇಡೀ ಕನ್ನಡಿಗರ ಅಸ್ಮಿತೆಯಾಗಿ ರೂಪಿಸುವ ಪ್ರಾಮಾಣಿಕ ಆಶಯಗಳಿಗೆ ಪೂರಕವಾಗಿ ದುಡಿಯಲು ನಾನು ಈ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವೆ ಎಂಬುದಾಗಿ ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರಲ್ಲದೆ.
ಕನ್ನಡ ಸಾಹಿತ್ಯ ಪರಿಷತ್ತನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ನಾಡಿನ ಮೂಲೆ ಮೂಲೆಯ ಜನರಿಗೆ ಕನ್ನಡ ಸಾಹಿತ್ಯವನ್ನು ತಲುಪಿಸುವ ಯೋಜನೆ ಸೇರಿದಂತೆ ಗಡಿನಾಡ ಕನ್ನಡಿಗರ ರಕ್ಷಣೆಗೆ ಕಾನೂನು ನೆರವು, ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗದ ಮೀಸಲಾತಿ ಜಾರಿಗೆ ಬೃಹತ್ ಹೋರಾಟ ರೂಪಿಸುವ ಯೋಜನೆ ಹೊಂದಿದ್ದೇನೆ ಎಂಬುದಾಗಿ ಅವರು ಹೇಳಿದರು.
ಬಹುಮುಖ್ಯವಾಗಿ ಬ್ರಷ್ಟಾಚಾರ ಮುಕ್ತ ಸಾಹಿತ್ಯ ಪರಿಷತ್ತು ನಮ್ಮ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸಮಾಜಮುಖಿಯಾಗಿ, ಜಾತ್ಯಾತೀತವಾಗಿ, ಬ್ರಷ್ಟಾಚಾರ ಮುಕ್ತವಾಗಿ ಕೊಂಡೊಯ್ಯುವ ಕನಸು ಹೊತ್ತಿರುವ ಎಲ್ಲಾ ವರ್ಗದ ಮನಸ್ಸುಗಳು ನಮ್ಮೊಂದಿಗೆ ಕೈಜೋಡಿಸಿ ಈ ಚುನಾವಣೆಯಲ್ಲಿ ನನ್ನ ಗೆಲುವಿಗೆ ಸಹಕರಿಸಬೇಕು ಎಂಬುದಾಗಿ ಈ ಸಂದರ್ಭದಲ್ಲಿ ಅವರು ಮನವಿ ಮಾಡಿದರು.
ಕನ್ನಡ ನಾಡಿನಲ್ಲಿಯೇ ಅತ್ಯಂತ ವಿಶಿಷ್ಟ ಹಾಗೂ ಚರಿತ್ರಾರ್ಹ ನೆಲವಾಗಿರುವ ಈ ಹಿರಿಯೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರು, ದಿನದ ಇಪ್ತ್ನಾಲ್ಕು ಗಂಟೆಯೂ ಕನ್ನಡ ಕಟ್ಟುವಿಕೆಗಾಗಿ ಬದುಕನ್ನು ಮೀಸಲೀಡಲು ತಯಾರಾಗಿರುವ ನನಗೆ ತಮ್ಮ ಅಮೂಲ್ಯವಾದ ಮತ ನೀಡಿ ಆಶಿರ್ವದಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ ಎಂಬುದಾಗಿ ಅವರು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಅಣ್ಣಾ ಫೌಂಡೇಷನ್ ಕಾರ್ಯದರ್ಶಿ ದುರುಗೇಶ್ ಉಪ್ಪಾರ, ಶಿಕ್ಷಣಸಂಸ್ಥೆಗಳ ಸಮೂಹ ಅಧ್ಯಕ್ಷ ಎಸ್.ಜಿ.ಪಾಟೀಲ್ ಬಳ್ಳಾರಿ, ನಮ್ಮ ಕರ್ನಾಟಕ ರಕ್ಷಣಾವೇದಿಕೆ ಅಧ್ಯಕ್ಷ ಹನುಮೇಶ್ ಉಪ್ಪಾರ, ಪ್ರಚಾರ ಸಮಿತಿ ಅಧ್ಯಕ್ಷರಾದ ತರುಣ್ ಕುಮಾರ್ ಉಪಸ್ಥಿತರಿದ್ದರು.