ನಟ ಚೇತನ್ ಅಹಿಂಸಾ ಬಂಧನ.!? ನಟನ ಪತ್ನಿ ಮೇಘಾ ಫೆಸ್ ಬುಕ್ ಲೈವ್ ನಲ್ಲಿ ಹೇಳಿದ್ದೇನು.?
ಬೆಂಗಳೂರು: ನಟ ಚೇತನ್ ಅಹಿಂಸಾ ಅವರನ್ನು ಯಾವುದೇ ನೋಟಿಸ್ ನೀಡದೇ ಪೊಲೀಸರು ಬಂಧಿಸಿದ್ದು, ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಚೇತನ್ ಅವರ ಪತ್ನಿ ಮೇಘಾ ಫೇಸ್ ಬುಕ್ ಲೈವ್ ಬರುವ ಮೂಲಕ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿದ್ದ ಚೇತನ್ ಅವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಮನೆಯಲ್ಲಿದ್ದ ಕೆಲಸಗಾರರು ತಿಳಿಸುತ್ತಿದ್ದು, ಅವರ ಮೊಬೈಲ್ ಗೆ ಕರೆ ಮಾಡಿದರೆ, ಸ್ವಿಚ್ ಆಫ್ ಎಂದು ಬರುತ್ತಿದೆ ಎಂದು ತಿಳಿಸಿದ್ದಾರೆ.
ನನ್ನ ಪತಿ ಚೇತನ್ ನಾಪತ್ತೆಯಾಗಿದ್ದು ಎಲ್ಲಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಮನೆ ಕೆಲಸಗಾರರು ಕೊಟ್ಟ ಮಾಹಿತಿಯ ಆಧಾರದ ಮೇಲೆ ಇಲ್ಲಿಯ ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್ ಗೆ ಬಂದು ವಿಚಾರಿಸಿದರೆ, ಅವರು ಇಲ್ಲಿಲ್ಲ ಎಂದು ಪೊಲೀಸರು ತಿಳಿಸುತ್ತಿದ್ದಾರೆ.
ಚೇತನ್ ಅವರಿಗೆ ಯಾವುದೇ ನೋಟಿಸ್ ಬಂದಿಲ್ಲ, ಆದರೂ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಣ ಕೇಳಿದರೆ ಹೇಳುತ್ತಿಲ್ಲ. ಕುಟುಂಬಸ್ಥರಿಗೂ ಯಾವುದೇ ಮಾಹಿತಿ ನೀಡಿಲ್ಲ, ಸುಮ್ನೆ ಮನೆಗೆ ಬಂದು, ಕರೆದುಕೊಂಡು ಹೋಗಿದ್ದಾರೆ. ಇದು ಒಂದು ಅಪಹರಣದಂತೆ ನಡೆದಿದೆ ಎಂದು ಅವರು ಹೇಳಿದರು.
ಅವರ ಅಭಿಮಾನಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಟ ಚೇತನ್ ಅಹಿಂಸ ಅವರಿಗೆ ಏನಾದರು ಆದರೆ ರಾಜ್ಯ ಸರ್ಕಾರ ಮತ್ತೊಂದು ಸವಾಲು ಎದುರಿಸಬೇಕಾಗುತ್ತದೆ ಎಂದು ಪೊಲೀಸರ ವಿರುದ್ಧ ಕಿಡಿಕಾರುತ್ತಿದ್ದಾರೆ.