Industry: ಉದ್ಯಮ ವಿಶ್ಲೇಷಣೆ ಸ್ಪರ್ಧೆ ಉತ್ಕರ್ಷ-2025 ಕಾರ್ಯಕ್ರಮದಲ್ಲಿ ಸಲಹೆ ಕ್ರಿಯಾಶೀಲ ಯೋಜನೆ, ಯೋಚನೆಯಿಂದ ಯಶಸ್ಸು: ಡಾ.ಜೋಶಿ

ದಾವಣಗೆರೆ: (Industry) ವೃತ್ತಿ ಕೌಶಲ್ಯ, ವ್ಯಾವಹಾರಿಕ ಶೈಲಿ, ಸೃಜನಶೀಲ ಆಲೋಚನಾ ಕ್ರಮಗಳು ವೃತ್ತಿ ಬದುಕಿಗೆ ಅನಿವಾರ್ಯ ಅಗತ್ಯಗಳಾಗಿವೆ. ಯಾವುದೇ ಕ್ಷೇತ್ರದಲ್ಲಿದ್ದರೂ ವಿದ್ಯಾರ್ಥಿಗಳು ಕ್ರಿಯಾಶೀಲ ಯೋಜನೆ, ಯೋಚನೆಗಳ ಮೂಲಕ ಯಶಸ್ಸು ಸಾಧಿಸಲು ಸಾಧ್ಯ ಎಂದು ಹುಬ್ಬಳ್ಳಿಯ ಎಂ.ಎA. ಜೋಶಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಶ್ರೀನಿವಾಸ ಜೋಶಿ ಮಾತನಾಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ವ್ಯವಹಾರ ನಿರ್ವಹಣೆ ಅಧ್ಯಯನ ವಿಭಾಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ಉದ್ಯಮ ವಿಶ್ಲೇಷಣೆ ಸ್ಪರ್ಧೆ ಉತ್ಕರ್ಷ-೨೦೨೫ ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಮಟ್ಟದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಇದೆ. ಎಲ್ಲ ರೀತಿಯ ಪೈಪೋಟಿಯನ್ನು ಎದುರಿಸಿ ಮುನ್ನುಗ್ಗಿದರೆ ಭವಿಷ್ಯದ ದಾರಿ ಸುಲಭವಾಗತ್ತದೆ. ಅದಕ್ಕಾಗಿ ಓದಿನ ಜೊತೆ ವ್ಯವಹಾರ ಜ್ಞಾನ, ವೃತ್ತಿ ಕೌಶಲ್ಯ ಮತ್ತು ಸಂವಹನ ಕಲೆಗಳನ್ನು ರೂಢಿಸಿಕೊಳ್ಳಬೇಕು. ಇದು ಪ್ರತಿಯೊಬ್ಬರ ವೈಯಕ್ತಿಕ ಪ್ರಯತ್ನದಿಂದ ಸಾಧ್ಯ ಎಂದು ತಿಳಿಸಿದರು.
ಈಗ ಕಾಲ ಬದಲಾಗುತ್ತಿದೆ. ತಂತ್ರಜ್ಞಾನ ವ್ಯಾಪಕವಾಗುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಪರಿವರ್ತನೆಗಳತ್ತ ಗಮನ ನೀಡಬೇಕು. ಮುಂದೆ ಪ್ರತಿ ಉದ್ಯಮದ ಮೇಲೆ ಪರಿಣಾಮ ಬೀರುವ ಮೂಲಭೂತ ಬದಲಾವಣೆಗಳು, ಅವು ಭವಿಷ್ಯದ ಪಾತ್ರಗಳನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನುಡಿದರು.
ವಿದ್ಯಾರ್ಥಿಗಳು ಓದು, ಅಂಕಗಳಿಗಷ್ಟೇ ಆದ್ಯತೆ ನೀಡದೆ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತಲೂ ಗಮನ ನೀಡಬೇಕು. ಉತ್ತಮ ಆಹಾರ ಕ್ರಮ, ವ್ಯಾಯಾಮಗಳ ಜೊತೆ ಒತ್ತಡ ನಿವಾರಿಸಿಕೊಳ್ಳುವತ್ತ ಗಮನ ನೀಡಬೇಕು. ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತು ಪ್ರಗತಿಯನ್ನು ಮೌಲ್ಯಮಾಪನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಫಿನ್‌ಟೆಕ್ ಏಕ್ಸ್ಫರ್ಟ್ ಸಂಸ್ಥೆ ಹಿರಿಯ ಉಪಾಧ್ಯಕ್ಷ ಮಂಜುನಾಥ ಉದ್ಯಾವರ ಮಾತನಾಡಿ, ಮುಂದಿನ ದಿನಗಳಲ್ಲಿ ಜಗತ್ತಿನ ಎಲ್ಲ ದೇಶಗಳು ಹಣಕಾಸು ಮತ್ತು ತಂತ್ರಜ್ಞಾನ ವ್ಯವಹಾರಗಳಿಗೆ ಹೆಚ್ಚಿನ ಆದ್ಯತೆ ನೀಡಲಿವೆ. ಎಂಬಿಎ ವಿದ್ಯಾರ್ಥಿಗಳಿಗೆ ಹಣಕಾಸು ಮತ್ತು ತಂತ್ರಜ್ಞಾನ ಆಧಾರಿತ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ಅವಕಾಶಗಳಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬದ್ಧತೆಯಿಂದ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ಮೀರಿ, ಹಣಕಾಸು, ಮಾರ್ಕೆಟಿಂಗ್, ಕಾರ್ಯಾಚರಣೆ ಮತ್ತು ಕಾರ್ಯತಂತ್ರಗಳAತಹ ಮೂಲಭೂತ ವಿಷಯಗಳನ್ನು ಅರ್ಥ ಮಾಡಿಕೊಂಡರೆ ಭವಿಷ್ಯದ ಯಶಸ್ಸಿಗೆ ಅಡಿಪಾಯ ಹಾಕಿದಂತಾಗುತ್ತದೆ. ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹಾರ ಮತ್ತು ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡರೆ ಅನುಕೂಲ. ಯಾವುದೇ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿಜ್ಞಾನ ನಿಕಾಯದ ಡೀನ್, ಪ್ರಭಾರ ಕುಲಪತಿ ಪ್ರೊ.ಯು.ಎಸ್.ಮಹಾಬಲೇಶ್ವರ ಮಾತನಾಡಿ, ‘ನಿಮ್ಮ ಸಹಪಾಠಿಗಳು ನಿಮ್ಮ ಭವಿಷ್ಯದ ಜಾಲ. ಅವರೊಂದಿಗೆ ಬಲವಾದ ಸಂಬAಧ ಬೆಳೆಸಿಕೊಳ್ಳಿ. ಕೇವಲ ವ್ಯಾಪಾರ ಕಾಡ್‌ಗಳತ್ತ ಗಮನ ನೀಡಬೇಡಿ, ಅರ್ಥಪೂರ್ಣ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳಿ. ವಿವಿಧ ವೃತ್ತಿಗಳನ್ನು ತಿಳಿಯುವ ಸಂಪರ್ಕ ಜಾಲವನ್ನು ಹೆಚ್ಚಿಸಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಿ. ವೃತ್ತಿಪರತೆಯನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಭಾರತ ಆರ್ಥಿಕ ಅಭಿವೃದ್ಧಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪರಿಸರ, ಸಾಮಾಜಿಕ ಮತ್ತು ಆಡಳಿತ ಅಂಶಗಳು ವ್ಯಾಪಾರ ಕಾರ್ಯತಂತ್ರಕ್ಕೆ ಕೇಂದ್ರಬಿAದುವಾಗುತ್ತಿವೆ. ಅವುಗಳ ಪ್ರಸ್ತುತತೆಯನ್ನು ಮತ್ತು ಅವು ಹೇಗೆ ಮೌಲ್ಯವನ್ನು ಸೃಷ್ಟಿಸುತ್ತವೆ ಎಂಬುದರ ಜೊತೆಗೆ ನಿರಂತರವಾಗಿ ವಿಕಸನಗೊಳ್ಳುತ್ತಿರುವ ವ್ಯಾಪಾರ ಜಗತ್ತಿನಲ್ಲಿ ನಿರಂತರ ಕಲಿಕೆ ಮತ್ತು ಹೊಂದಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 160 ಕಾಲೇಜು ತಂಡಗಳ ಸುಮಾರು 400 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಾಧ್ಯಾಪಕರಾದ ಪ್ರೊ.ಜೆ.ಕೆ.ರಾಜು, ಡಾ.ಸುನಿತಾ, ಡಾ.ಆಸೀಫ್‌ಉಲ್ಲಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ, ಸಹಾಯಕ ಪ್ರಾಧ್ಯಾಪಕ ಡಾ.ರಮೇಶ ಚಂದ್ರಹಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಬಿಎ ವಿಭಾಗದ ಅಧ್ಯಕ್ಷ, ಡೀನ್ ಪ್ರೊ.ಆರ್.ಶಶಿಧರ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ ಬೊಮ್ಮಣ್ಣನವರ ವಂದಿಸಿದರು.