ಕಡಲೆ ಬೆಳೆಯಲ್ಲಿ ನಿರ್ವಹಣಾ ತಾಂತ್ರಿಕತೆಗಳ ಬಗ್ಗೆ ರೈತರಿಗೆ ಸಲಹೆ
ಕಡಲೆ ಬೆಳೆಯಲ್ಲಿ ನಿರ್ವಹಣಾ ತಾಂತ್ರಿಕತೆಗಳ ಬಗ್ಗೆ ರೈತರಿಗೆ ಸಲಹೆ
ದಾವಣಗೆರೆ: ಕಡಲೆ ಬೆಳೆಯಲ್ಲಿ ನಿರ್ವಹಣಾ ತಾಂತ್ರಿಕತೆಗಳ ಬಗ್ಗೆ ಕೃಷಿ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.
ಹಿಂಗಾರು ಹಂಗಾಮು ಆರಂಭವಾಗಿದ್ದು, ದಾವಣಗೆರೆ ಜಿಲ್ಲೆಯಾದ್ಯಂತ ಕಡಲೆ ಬೆಳೆ ಬೆಳವಣಿಗೆಯಿಂದ ಕಾಯಿಕಟ್ಟುವ ಹಂತದಲ್ಲಿದೆ. ಈ ಸಮಯದಲ್ಲಿ ರೈತರು ಕೆಲವು ನಿರ್ವಹಣಾ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ.
ಕಡಲೆ ಬೆಳೆ 30 ರಿಂದ 40 ದಿನಗಳ ಬೆಳೆಯಿದ್ದಾಗ ಕುಡಿ ಚಿವುಟುವುದರಿಂದ ಕವಲುಗಳ ಸಂಖ್ಯೆ ಹೆಚ್ಚಾಗಿ ಹೆಚ್ಚಿನ ಇಳುವರಿ ನಿರೀಕ್ಷಿಸಬಹುದು. ಬಿತ್ತನೆಯಾದ 35 ದಿನಗಳ ನಂತರ ನ್ಯಾಫ್ತಾಲಿಕ್ ಅಸಿಟಿಕ್ ಆಸಿಡ್ (ಎನ್.ಎ.ಎ.) 20 ಪಿ.ಪಿ.ಎಂ. ನ್ನು 100 ಲೀಟರ್ ನೀರಿಗೆ 2 ಮಿ.ಲೀ. ಬೆರೆಸಿ ಬೆಳೆಗೆ ಸಿಂಪಡಿಸುವುದರಿಂದ ಬೆಳೆ ಸದೃಢ, ಆರೋಗ್ಯಕರ ಬೆಳವಣಿಗೆ ಹೊಂದುತ್ತದೆ. ಬಿತ್ತನೆಯಾದ 35 ದಿನಗಳ ನಂತರ ಸಸ್ಯವರ್ಧಕವಾದ ಟ್ರೈಕೊಂಟಿನಾಲ್ 1 ಮಿ.ಲೀ.ನ್ನು 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಹೂವು ಮತ್ತು ಕಾಯಿಗಳ ಸಂಖ್ಯೆ ಹೆಚ್ಚುವುದು. ಸಾವಯವ ರೈತರು ಬೀಜಾಮೃತ ಸಿಂಪರಣೆ ಕೈಗೊಳ್ಳಬಹುದು.
ಸಸ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾಯಿಕೊರಕದ ಬಾಧೆ ಕಂಡುಬಂದಲ್ಲಿ 1 ರಿಂದ 1.5 ಮಿ.ಲೀ. ಅಜಾಡಿರೆಕ್ಟಿನ್‍ನ್ನು 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ 0.5 ಗ್ರಾಂ. ಇಮಾಮೆಕ್ಟಿನ್ ಬೆನ್ಜೋಯೇಟ್ 5 ಎಸ್.ಜಿ. ಅಥವಾ 0.2- 0.4 ಮಿ.ಲೀ. ಕ್ಲೋರಂಟ್ರಿನಿಲಿಪೋಲ್‍ನ್ನು 18.5 ಎಸ್. ಸಿ. ಯನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ನಿರ್ವಹಣಾ ಕ್ರಮವಾಗಿ ಜಮೀನಿನಲ್ಲಿ ಕವಲೊಡೆದ ಕೊಂಬೆಗಳನ್ನು ನೆಟ್ಟು ಜಮೀನಿನಲ್ಲಿ ಹಾಗೂ ಸುತ್ತಲೂ ಮಂಡಕ್ಕಿ ಅಥವಾ ಅನ್ನ ಚೆಲ್ಲುವುದರಿಂದ ಪಕ್ಷಿಗಳು ಆಕರ್ಷಿತವಾಗಿ ರೆಂಬೆ ಮೇಲೆ ಕುಳಿತುಕೊಳ್ಳುತ್ತವೆ. ಹಾಗೆಯೇ ಬೆಳೆಯಲ್ಲಿರುವ ಕೀಟಗಳನ್ನು ಹಿಡಿದು ತಿನ್ನುತ್ತವೆ.
ಈ ಸಮಯದಲ್ಲಿ ಈ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಕಡಲೆಯಲ್ಲಿ ನಿರೀಕ್ಷಿತ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.