ಕೃಷಿ ಕಾಯ್ದೆ ಅನೂರ್ಜಿತಕ್ಕಾಗಿ ರಾಷ್ಟ್ರಪತಿಗಳಿಂದ ಅಂಕಿತಕ್ಕೆ ಆಗ್ರಹ: ಸಂಯುಕ್ತ ಹೋರಾಟ ಕರ್ನಾಟಕ ದಾವಣಗೆರೆ ಜಿಲ್ಲಾ ಘಟಕದಿಂದ ಪ್ರತಿಭಟನೆ

ದಾವಣಗೆರೆ: ಮೂರು ಕೃಷಿ ಕಾಯ್ದೆಗಳು ಈಗಾಗಲೇ ಸಂಸತ್ತಿನಲ್ಲಿ ಅನುಮೋದನೆ ಪಡೆದಿದ್ದು, ಅವುಗಳ ಅನೂರ್ಜಿತಕ್ಕಾಗಿ ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸುವಂತೆ ಒತ್ತಾಯಿಸಿ ನಗರದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ದಾವಣಗೆರೆ ಜಿಲ್ಲಾ ಘಟಕ ಶುಕ್ರವಾರ ಪ್ರತಿಭಟನೆ ನಡೆಸಿತು.
ನಗರದ ಜಯದೇವ ವೃತ್ತದಲ್ಲಿ ಟ್ರ್ಯಾಕ್ಟರ್‌ಗಳ ಸಮೇತ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ನಂತರ ಆಶೋಕ ರಸ್ತೆ, ಮಹಾತ್ಮಾಗಾಂಧಿ ವೃತ್ತ, ಪಿ.ಬಿ.ರಸ್ತೆ ಮೂಲಕ ಸಾಗಿ ಉಪ ವಿಭಾಗಾಧಿಕಾರಿ ಕಚೇರಿ ತಲುಪಿ ಮನವಿ ಸಲ್ಲಿಸುವ ಮೂಲಕ ದೇಶದ ಪ್ರಧಾನ ಮಂತ್ರಿಗಳಿಗೆ ರವಾನಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕ ಅವರಗೆರೆ ಹೆಚ್.ಜಿ.ಉಮೇಶ್, ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದೀಗ ರಾಜಕೀಯ ಇಚ್ಚಾಶಕ್ತಿಯಿಂದಾಗಿ ಅದನ್ನು ಹಿಂಪಡೆಯಲಾಗಿದೆ. ರೈತರಿಗೆ ವಿರೋಧವಾಗಿದ್ದ ಕಾಯಿದೆಗಳನ್ನು ಹಿಂಪಡೆಯಲು ಒಂದು ವರ್ಷ ಬೇಕಿತ್ತಾ. ಆದರೆ, ಈ ಕೂಡಲೇ ಈ ಕಾಯಿದೆಗಳನ್ನು ರಾಷ್ಟ್ರಪತಿಯವರಿಗೆ ನೀಡಿ ಅಂಕಿತ ಹಾಕಿಸಬೇಕು. ಅಲ್ಲಿಯವರೆಗೆ ಪ್ರಕ್ರಿಯೆ ಮುಗಿಯುವುದಿಲ್ಲ. ಆ ಬಗ್ಗೆ ಸೂಕ್ತ ಕ್ರಮವನ್ನು ಪ್ರಧಾನ ಮಂತ್ರಿಗಳು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿಗೆ ಅನುಸಾರವಾಗಿ ಕನಿಷ್ಠ ಬೆಂಬಲ ಬೆಲೆ ನಿಗಧಿ ಮಾಡಬೇಕು. ಜತೆಗೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಕಾಯಿದೆ ಮಾಡುವ ಮೂಲಕ ರೈತರನ್ನು ರಕ್ಷಿಸಬೇಕು. ಅಲ್ಲದೇ ರಾಜ್ಯದಲ್ಲಿ ಜಾರಿಗೆ ತರಲು ಮುಂದಾಗಿರುವ ಎಪಿಎಂಸಿ, ವಿದ್ಯುತ್, ಪಂಪುಸೆಟ್ಟುಗಳಿಗೆ ವಿದ್ಯುತ್ ಮೀಟರ್ ಕಾಯಿದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ದೇಶಾದ್ಯಂತ ಕಳೆದ ಒಂದು ವರ್ಷದಿಂದ ಹೋರಾಟ ನಡೆದ ಸಂದರ್ಭದಲ್ಲಿ ಹಲವಾರು ರೈತರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಪ್ರತಿ ಕುಟುಂಬಗಳಿಗೆ ೫೦ ಲಕ್ಷ ಪರಿಹಾರ ನೀಡಬೇಕು. ಜತೆಗೆ ಮೃತರ ಕುಟುಂಬದ ಸದಸ್ಯರಿಗೆ ಕೇಂದ್ರ ಸರ್ಕಾರಿ ನೀಡಬೇಕು. ಅಲ್ಲದೇ ರೈತರ ಮೇಲಿನ ದ್ವೇಷಪೂರಿತ ಕೇಸುಗಳನ್ನು ಕೈಬಿಡಬೇಕು. ರೈತರನ್ನು ಹತ್ಯೆ ಮಾಡಿದ ಆಶಿಶ್ ಮಿಶ್ರಾಗೆ ಉಗ್ರ ಶಿಕ್ಷೆ ನೀಡಬೇಕು. ಮಾತ್ರವಲ್ಲ ಸಚಿವ ಅಜಯ್ ಮಿಶ್ರಾನನ್ನು ವಜಾಗೊಳಿಸಬೇಕೆಂದರು.
ಈ ವೇಳೆ ವಿವಿಧ ಪ್ರಗತಿ ಪರ ಸಂಘಟನೆಗಳ ಪದಾಧಿಕಾರಿಗಳಾದ ಹುಚ್ಚವ್ವನಹಳ್ಳಿ ಮಂಜುನಾಥ್, ಗುಮ್ಮನೂರು ಬಸವರಾಜ್, ಐರಣಿ ಚಂದ್ರು, ನರೇಗಾ ರಂಗನಾಥ್, ಲೋಕೇಶ್ ಆವರಗೆರೆ, ಇ.ಎಸ್.ಉಮೇಶ್, ಹೊನ್ನೂರು ಮುನಿಯಪ್ಪ, ಜಬಿನಾಖಾನಂ, ಫರೀದಾ, ಹಮೀದಾ, ಹಸೀನಾ, ನಾಜೀಮಾ, ಶಾಹೀನಾ, ಕೆಂಚಮ್ಮನಹಳ್ಳಿ ಹನುಮಂತ, ಕೈದಾಳೆ ಮಂಜುನಾಥ್, ಮಧು ತೊಗಲೇರಿ, ಡಾ.ಟಿ.ಎಸ್.ಸುನೀತ್‌ಕುಮಾರ್, ನಾಗಜ್ಯೋತಿ, ಅಣಬೇರು ತಿಪ್ಪೇಸ್ವಾಮಿ, ರಾಮಗೊಂಡನಹಳ್ಳಿ ನಾಗರಾಜ್, ಬಲ್ಲೂರು ರವಿಕುಮಾರ್ ಇತರರು ಇದ್ದರು.