Aiims: ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಿ; ಕೇಂದ್ರಕ್ಕೆ ಕರ್ನಾಟಕದ ಸಂಸದರ ಒತ್ತಾಯ

IMG-20250327-WA0019

ದಾವಣಗೆರೆ: (Aiims) ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್ )ಯನ್ನು ರಾಯಚೂರಿನಲ್ಲಿ ಸ್ಥಾಪಿಸಬೇಕು ಎಂದು ಕರ್ನಾಟಕದ ಕಾಂಗ್ರೆಸ್ ಸಂಸದರು ನವದೆಹಲಿಯಲ್ಲಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಸದಸ್ಯರೊಂದಿಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನವದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ದಾವಣಗೆರೆ ‌ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿದ್ದಾರೆ. ಕಲ್ಯಾಣ ಕರ್ನಾಟಕದ ಭಾಗವಾದ ರಾಯಚೂರು ಆರ್ಥಿಕವಾಗಿ ಹಿಂದುಳಿದಿದೆ. ಏಮ್ಸ್ ಸ್ಥಾಪನೆಯಿಂದ ಶಿಕ್ಷಣ ಮತ್ತು ಆರೋಗ್ಯ ಸೇವೆ ಸುಧಾರಣೆಯಾಗುವುದರ ಜೊತೆಗೆ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶಗಳು ಲಭ್ಯವಾಗಲಿದೆ.ಡಾ.ಡಿ.ಎಂ.ನಂಜುಂಡಪ್ಪ ಸಮಿತಿಯ ವರದಿಯಂತೆ ಕಲ್ಯಾಣ ಕರ್ನಾಟಕ ಪ್ರಾಂತ್ಯಕ್ಕೆ ಏಮ್ಸ್ ಮಂಜೂರಾತಿಗೆ ಶಿಫಾರಸ್ಸು ಮಾಡಿತ್ತು ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ಅನುದಾನ ನೀಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಿತ್ತು ಎಂದರು.

ಕರ್ನಾಟಕ ಭಾರತದ ಜಿಡಿಪಿಗೆ ೮.೨ % ಮತ್ತು ಕೇಂದ್ರದ ಒಟ್ಟು ತೆರಿಗೆ ಆದಾಯಕ್ಕೆ ೮% ಕೊಡುಗೆ ನೀಡುತ್ತಿದೆ ಆದರೂ ಕರ್ನಾಟಕಕ್ಕೆ ಒಂದು ಏಮ್ಸ್ ಕೂಡ ಮಂಜೂರಾಗಿಲ್ಲ ಎಂದು‌ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದರು. ನಾನು ಕೇಂದ್ರ ಸರ್ಕಾರದ ಹೆಲ್ತ್ ಕಮಿಟಿಯ ಸದಸ್ಯೆಯಾಗಿದ್ದು ಸಮಿತಿಯ ಸಭೆಯಲ್ಲಿ ಸಾಕಷ್ಟು ಬಾರಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ.ರಾಯಚೂರಿಗೆ ಏಮ್ಸ್ ಸ್ಥಾಪಿಸಬೇಕೆಂದು ನಡೆಯುತ್ತಿರುವ ಹೋರಾಟ 1050 ದಿನಕ್ಕೆ ಕಾಲಿಟ್ಟಿದೆ.ಹೋರಾಟ ಸಮಿತಿಯ ಸದಸ್ಯರು ನನಗೆ ಎರಡು ಬಾರಿ ಮನವಿ ಮಾಡಿದ್ದಾರೆಂದರು.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ.ನಾವು ಹೇಳುತ್ತಲೇ ಇದ್ದೇವೆ ಅವರು ಮಲತಾಯಿ ಧೋರಣೆ ಅನುಸರಿಸುತ್ತಲೇ ಇದ್ದಾರೆ.ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು,ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ಸಂಸದರು ಸಾಕಷ್ಟು ಮನವಿ ಮಾಡಿದ್ದೇವೆ.ಕಳೆದ ಬಾರಿ ಕಾಂಗ್ರೆಸ್ ನಿಂದ ಒಬ್ಬರು ಮಾತ್ರ ಸಂಸದರಿದ್ದರು ಈ ಬಾರಿ ೯ ಸಂಸದರಿದ್ದೇವೆ ನಾವೆಲ್ಲಾ ಒಮ್ಮತದಿಂದ ರಾಯಚೂರಿಗೆ ಏಮ್ಸ್ ಸ್ಥಾಪಿಸಬೇಕೆಂದು ಕೇಳುತ್ತಿದ್ದೇವೆ ಎಂದರು.

ಇದರ ಜೊತೆಗೆ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ ‌ವೇತನ ಹೆಚ್ಚಿಸಿದೆ ಆದರೆ ಕೇಂದ್ರ ಸರ್ಕಾರ ಕೇವಲ ೨ ಸಾವಿರ ರೂಪಾಯಿ ನೀಡುತ್ತಿದೆ ಎಂದರು.ನಬಾರ್ಡ್, ಕೃಷಿ ವಲಯ ಅಪ್ಪರ್ ಭದ್ರಾ ಹೀಗೆ ಸಾಕಷ್ಟು ಯೋಜನೆಗಳಿಗೆ ಅನುದಾನ ಕರ್ನಾಟಕಕ್ಕೆ ಸಮಪರ್ಕವಾಗಿ ಬರಬೇಕಿದೆ ಈ ಬಗ್ಗೆ ಕೇಂದ್ರ ಸರ್ಕಾರದ ಸಚಿವರು ಹಾಗೂ ರಾಜ್ಯದ ಎಲ್ಲಾ ಸಂಸದರು ಪಕ್ಷಾತೀತವಾಗಿ ಕರ್ನಾಟಕದ ಕೂಗನ್ನು ಎತ್ತಿಹಿಡಿಯಬೇಕು ಇದರಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ಮುಖ್ಯ‌ಸಂಚಾಲಕರಾದ ಬಸವರಾಜ್ ಕಳಸ,
ರಾಯಚೂರು ಸಂಸದರಾದ ಜಿ.ಕುಮಾರ್ ನಾಯ್ಕ,ಹಾಸನ ಸಂಸದರಾದ ಶ್ರೇಯಸ್ ಪಟೇಲ್,ಬೀದರ್ ಸಂಸದರಾದ ಸಾಗರ್ ಖಂಡ್ರೆ,ಕಲ್ಬುರ್ಗಿ ಸಂಸದರಾದ ರಾಧಾಕೃಷ್ಣ ದೊಡ್ಡಮನಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!