ಎಐಟಿಯುಸಿ ಜಿಲ್ಲಾ ಸಮಿತಿ ಅಧಿಕಾರ ಸ್ವೀಕಾರ ಸಮಾರಂಭ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಲಜ್ಜೆಗೇಡಿ ಸರಕಾರ: ಕಾಂ. ಎಮ್.ಸಿ.ಡೋಂಗ್ರೆ

ದಾವಣಗೆರೆ: ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದಂತಹ ವಿಷಯಗಳನ್ನು ಚುನಾವಣೆ ಸಮಯದಲ್ಲಿ ಜನರ ಮುಂದಿಟ್ಟು ಅಧಿಕಾರಕ್ಕೆ ಬಂದ ಪಕ್ಷದ ಸರಕಾರ ಇದೀಗ ಬೆಲೆ ಏರಿಕೆಯನ್ನು ಸಮರ್ಥಿಸುತ್ತಿದೆ. ಇಂತಹ ಲಜ್ಜೆಗೇಡಿ ಸರಕಾರವನ್ನು ದೇಶ ಹಿಂದೆಂದೂ ಕಂಡಿಲ್ಲ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕಾಂ. ಎಮ್.ಸಿ.ಡೋಂಗ್ರೆ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ನಗರದ ಅಶೋಕ ರಸ್ತೆಯಲ್ಲಿನ ಕಾಂ.ಪಂಪಾಪತಿ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ
ಎಐಟಿಯುಸಿ ದಾವಣಗೆರೆ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತಾಡುತ್ತಿದ್ದರು.
ಕೊರೋನಾ ಸಾಂಕ್ರಾಮಿಕ ಪಿಡುಗಿನಿಂದ ಕಾರ್ಮಿಕ ವರ್ಗ ಒಂದೆಡೆ ಅಸಂಖ್ಯಾತ ಸಂಖ್ಯೆಯಲ್ಲಿ ಉದ್ಯೋಗವನ್ನು ಕಳೆದುಕೊಂಡಿದ್ದರೆ ಇನ್ನೊಂದೆಡೆ ಅಗತ್ಯ ವಸ್ತುಗಳ ತೀವ್ರ ಬೆಲೆ ಏರಿಕೆಯಿಂದ ಹೈರಾಣಾಗಿದೆ. ಇಂತಹ ರಾಷ್ಟ್ರೀಯ ವಿಪತ್ತಿನ ಈ ಸಂದರ್ಭದಲ್ಲಿ ಸರಕಾರವೇ ದುಡಿಯುವ ವರ್ಗದ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಹಿರಿಯ ಕಾರ್ಮಿಕ ಮುಖಂಡರಾಗಿದ್ದ ಹೆಚ್.ಕೆ.ರಾಮಚಂದ್ರಪ್ಪ ಅವರ ನಿಧನದಿಂದಾಗಿ ಜಿಲ್ಲಾ ಸಮಿತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಯು ಹೊಸ ನಾಯಕತ್ವ, ಹೊಸ ಚಿಂತನೆ ಹಾಗೂ ಹೊಸ ಹೋರಾಟಕ್ಕೆ ನಾಂದಿಯಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಿಕ್ಕಮಗಳೂರಿನ ಟೀ ಕಾಫಿ ಪ್ಲಾಂಟೇಷನ್ ವರ್ಕರ್ಸ್ ಫೆಡರೇಶನ್‌ನ ಮುಖಂಡ ಕಾಂ. ಬಿ.ಅಮ್ಜದ್ ಚಿಕ್ಕಮಗಳೂರು ಮಾತನಾಡಿ, ಕೇಂದ್ರ ಸರಕಾರವು ಬಂಡವಾಳಷಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ಅವರನ್ನು ಓಲೈಸುವುದಕ್ಕೋಸ್ಕರ ಕಾರ್ಮಿಕರ ಕಾನೂನಿಗೆ ತಿದ್ದುಪಡಿ ತರುತ್ತಿದೆ. ಆ ಮೂಲಕವಾಗಿ ಕಾರ್ಮಿಕರನ್ನು ಪುನಃ ದಾಸ್ಯದ ಸಂಕೋಲೆಯೊಳಗೆ ಬಂಧಿಸುವ ಹುನ್ನಾರ ನಡೆಯುತ್ತಿದೆ. ಅದನ್ನು ವಿರೋಧಿಸಿ ಎಐಟಿಯುಸಿ ಸಂಘಟನೆಯ ನೇತೃತ್ವದಲ್ಲಿ ಕಾರ್ಮಿಕರು ಐಕ್ಯ ಹೋರಾಟ ಮಾಡಬೇಕು. ಎಐಟಿಯುಸಿ ಸಂಘಟನೆ ಒಂದು ಶತಮಾನದಿಂದ ಕಾರ್ಮಿಕರ ಹಿತ ಕಾಯುವ ಕೆಲಸ ಮಾಡುತ್ತಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಪಾಲ್ಗೊಂಡ ಏಕೈಕ ಕಾರ್ಮಿಕ ಸಂಘಟನೆಯಾಗಿದೆ ಎಂದರು.
ಎಐಟಿಯುಸಿ ಸಂಘಟನೆ ಇಲ್ಲವಾಗಿದ್ದಿದ್ದರೆ ಕಾರ್ಮಿಕರ ಸ್ಥಿತಿ ಅತ್ಯಂತ ನಿಕೃಷ್ಠವಾಗಿರುತ್ತಿತ್ತು. ಎಐಟಿಯುಸಿಯ ಹೋರಾಟದ ಪರಂಪರೆಯನ್ನು ಜಿಲ್ಲಾ ಸಮಿತಿಗಳು ಪರಿಣಾಮಕಾರಿಯಾಗಿ ಮುಂದುವರೆಸಬೇಕು. ದಾವಣಗೆರೆ ಜಿಲ್ಲೆಯು ಅನೇಕ ಹಿರಿಯ ಮತ್ತು ಅನುಭವಿ ಹೋರಾಟಗಾರರನ್ನು ಹೊಂದಿರುವ ಜಿಲ್ಲೆ. ಅವರ ಮಾರ್ಗದರ್ಶನದಲ್ಲಿ ಹೊಸ ನಾಯಕತ್ವವು ಕಾರ್ಮಿಕರ ಹಕ್ಕಿಗಾಗಿ, ಸೌಲಭ್ಯಗಳಿಗಾಗಿ ದುಡಿಯಬೇಕು. ಕಾರ್ಮಿಕ ಸಂಘಟನೆಯನ್ನು ಇನ್ನಷ್ಟು ವಿಸ್ತರಿಸಬೇಕು. ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅವಿರತವಾಗಿ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ ಜಿಲ್ಲಾ ಖಜಾಂಚಿ ಕಾಂ.ಆನಂದರಾಜ್ ಮಾತನಾಡಿ, ಉದಾತ್ತವಾದ ಚಿಂತನೆಗಳು, ತತ್ವ ಸಿದ್ದಾಂತಗಳು, ಸಮರ್ಥ ನಾಯಕತ್ವವು ಯಾವುದೇ ಸಂಘಟನೆಯನ್ನು ಶಕ್ತಿಶಾಲಿಯಾಗಿ ಬೆಳೆಸಬಲ್ಲದು. ದಾವಣಗೆರೆ ಜಿಲ್ಲಾ ಸಮಿತಿಯ ನೂತನ ನಾಯಕತ್ವವು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಎಐಟಿಯುಸಿ ದಾವಣಗೆರೆ ಜಿಲ್ಲಾ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡ ಕೆ.ರಾಘವೇಂದ್ರ ನಾಯರಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಜಿ.ಉಮೇಶ್ ಅವರಗೆರೆ ಅವರಿಗೆ ಎಐಟಿಯುಸಿ ಧ್ವಜವನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರ ಮಾಡಲಾಯಿತು.
ನೂತನ ಆಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಕಾರ್ಮಿಕರ ಹೋರಾಟದ ಇತಿಹಾಸದಲ್ಲಿ ದಾವಣಗೆರೆಗೆ ವಿಶೇಷವಾದ ಸ್ಥಾನವಿದೆ. ಕಾರ್ಮಿಕ ಮುಖಂಡರ ನಡುವೆ ಸಮನ್ವಯತೆ ಮೂಡಿಸುವುದರ ಮೂಲಕ ಮತ್ತು ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಪುನಾರಚನೆ ಮಾಡಿ ಎಐಟಿಯುಸಿ ಸಂಘಟನೆಯನ್ನು ಬಲಿಷ್ಟವಾಗಿ ಕಟ್ಟುತ್ತೇವೆ ಎಂದರು.
ನೂತನ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಉಮೇಶ್ ಅವರಗೆರೆ ಮಾತನಾಡಿ, ಕಾರ್ಮಿಕರಲ್ಲಿ ರಾಜಕೀಯ ಅರಿವು ಮೂಡಿಸಿ ಅವರನ್ನು ರಾಜಕೀಯ ಶಕ್ತಿಯಾಗಿ ಸಜ್ಜುಗೊಳಿಸುವ ಕೆಲಸವನ್ನು ಸವಾಲಾಗಿ ಸ್ವೀಕರಿಸಿ ದುಡಿಯುತ್ತೇನೆ. ಅಸಂಘಟಿತ ವಲಯದ ಕಾರ್ಮಿಕರ ಏಳಿಗೆಗಾಗಿ ದುಡಿದ ಕಾಂ.ಹೆಚ್‌ಕೆಆರ್ ಅವರ ಹೋರಾಟವನ್ನು ಮುಂದುವರೆಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಹಾಗೂ ಕಾರ್ಮಿಕ ನಾಯಕ ಅವರಗೆರೆ ಚಂದ್ರು, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದ ಮೂರ್ತಿ, ಅಂಗನವಾಡಿ ಫೆಡರೇಶನ್‌ನ ಎಮ್.ಬಿ.ಶಾರದಮ್ಮ, ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ್, ಕಾರ್ಯಾಧ್ಯಕ್ಷ ಪಿ.ಕೆ.ಲಿಂಗರಾಜ್, ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಹಾಸನ ಎಐಟಿಯುಸಿಯ ಧರ್ಮರಾಜ್, ಇಪ್ಟಾ ಸಾಂಸ್ಕೃತಿಕ ಸಂಘಟನೆಯ ಐರಣಿ ಚಂದ್ರು, ರಾಮಣ್ಣ, ಎಸ್.ಎಸ್.ಮಲ್ಲಮ್ಮ, ಸರೋಜಾ, ಕಾಳಮ್ಮ, ರುದ್ರಮ್ಮ, ನೇತ್ರಾವತಿ, ಪಿ.ಷಣ್ಮುಖ ಸ್ವಾಮಿ, ಕಿಸಾನ್ ಸಭಾ ರಂಗನಾಥ್, ರಮೇಶ್, ಮುದ್ರಣ ಕಾರ್ಮಿಕರ ಸಂಘದ ರಾಜೇಂದ್ರ ಬಂಗೇರ, ಶಿವಕುಮಾರ್ ಶೆಟ್ಟರ್, ಚನ್ನಗಿರಿ ಪುರ ಸಭಾ ಸದಸ್ಯ ಹಾಗೂ ಕಾರ್ಮಿಕ ಮುಖಂಡ ಗೌಸ್ ಪೀರ್, ಮೊಹಮದ್ ರಫೀಕ್, ಬ್ಯಾಂಕ್ ನೌಕರರ ಸಂಘಟನೆಯ ಪದಾಧಿಕಾರಿಗಳಾದ ಕೆ.ವಿಶ್ವನಾಥ ಬಿಲ್ಲವ, ಆರ್.ಆಂಜನೇಯ, ಕಾಡಜ್ಜಿ ವೀರಪ್ಪ, ಹೆಚ್.ಎಸ್.ತಿಪ್ಪೇಸ್ವಾಮಿ, ಎಮ್.ಎಮ್.ಸಿದ್ದಲಿಂಗಯ್ಯ, ಸಿ.ಪರಶುರಾಮ್, ಕೆ.ರವಿಶಂಕರ್ ಹಾಗೂ ಕೆಎಸ್‌ಆರ್‌ಟಿಸಿಯ ಮಿರ್ಜಾ ಇಸ್ಮಾಯಿಲ್, ಪ್ರಕಾಶ್, ಹಮಾಲರ ಸಂಘದ ಕೃಷ್ಣಪ್ಪ, ಶೇಖರ್ ನಾಯ್ಕ್, ಸಾಮಿಲ್ ದಾದಾಪೀರ್, ಹೊನ್ನಾಳಿ ಪಯಾಜ್, ಚನ್ನಗಿರಿಯ ಈರಣ್ಣ, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.