ಎಸ್‌ಬಿಐ ಆಡಳಿತ ಮಂಡಳಿಯ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ- ಅಜಿತ್‌ಕುಮಾರ್ ನ್ಯಾಮತಿ

ಎಸ್‌ಬಿಐ ಆಡಳಿತ ಮಂಡಳಿಯ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ- ಅಜಿತ್‌ಕುಮಾರ್ ನ್ಯಾಮತಿ

ದಾವಣಗೆರೆ: ಆರೋಗ್ಯ ಸೌಲಭ್ಯ ವಿಮಾ ಯೋಜನೆ, ಭವಿಷ್ಯ ನಿಧಿಗೆ ಉದ್ಯೋಗದಾತರ ಕೊಡುಗೆಯಲ್ಲಿನ ಕುಂದುಕೊರತೆಗಳನ್ನು ಈಡೇರಿಕೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹವರ್ತಿ ಬ್ಯಾಂಕುಗಳ ನಿವೃತ್ತ ಉದ್ಯೋಗಿಗಳು ಮಾರ್ಚ್ 31 ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿರುವ ಎಸ್‌ಬಿಐ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪೆನ್ಶನರ್ಸ್ ಕಮ್ಯೂನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್‌ಕುಮಾರ್ ನ್ಯಾಮತಿ ತಿಳಿಸಿದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ಸಹವರ್ತಿ ಬ್ಯಾಂಕುಗಳು ವಿಲೀನಗೊಳ್ಳುವ ಸಂದರ್ಭದಲ್ಲಿ ನಿವೃತ್ತಿ ಸೌಲಭ್ಯ ಸೇರಿದಂತೆ ಎಸ್‌ಬಿಐ ನೌಕರರಿಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಯಾವುದೇ ತಾರತಮ್ಯವಿಲ್ಲದೇ ಸಹವರ್ತಿ ಬ್ಯಾಂಕುಗಳ ನೌಕರರಿಗೆ ಹಾಗೂ ನಿವೃತ್ತರಿಗೆ ವಿಸ್ತರಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ವಿಲೀನವಾಗಿ ಆರು ವರ್ಷಗಳು ಕಳೆದರೂ ಅನೇಕ ಸೌಲಭ್ಯಗಳನ್ನು ನೀಡಲಾಗಿಲ್ಲ. ಆರೋಗ್ಯ ಸೌಲಭ್ಯ ವಿಮಾ ಯೋಜನೆಯಲ್ಲಿ ಆರು ಬಗೆಯ ಗಂಭೀರ ಕಾಯಿಲೆಗಳಿಗೆ ವಿಮಾ ರಕ್ಷಣೆಯನ್ನು ಸಹವರ್ತಿ ಬ್ಯಾಂಕುಗಳ ನೌಕರರಿಗೆ ನೀಡಲಾಗಿಲ್ಲ. ಎಸ್‌ಬಿಐ ನಲ್ಲಿ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತರಾದವರಿಗೆ ಲಭಿಸುವ ಉಚಿತ ಆರೋಗ್ಯ ವಿಮೆ/ಲಾಭ ಯೋಜನೆಯನ್ನು ಸಹವರ್ತಿ ಬ್ಯಾಂಕುಗಳಲ್ಲಿ ಅದೇ ಹುದ್ದೆಯಲ್ಲಿ ನಿವೃತ್ತರಾದವರಿಗೆ ಇನ್ನೂ ವಿಸ್ತರಣೆ ಮಾಡಿಲ್ಲ. ಭವಿಷ್ಯ ನಿಧಿಗೆ ನೀಡುವ ಉದ್ಯೋಗದಾತರ ಕೊಡುಗೆಯನ್ನು ಸಹವರ್ತಿ ಬ್ಯಾಂಕುಗಳ ಉದ್ಯೋಗಿಗಳಿಗೆ ಅವರು ಉದ್ಯೋಗಕ್ಕೆ ಸೇರಿದ ದಿನಾಂಕದಿಂದ ಜಾರಿಗೊಳಿಸಿರುವುದಿಲ್ಲ. ನಿವೃತ್ತರಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಚರ್ಚಿಸಲು ಮತ್ತು ಮಾಹಿತಿಗಳನ್ನು ನೀಡಲು ಕಾಲ ಕಾಲಕ್ಕೆ ನಡೆಸುವ ಸಭೆಗೆ ಸಹವರ್ತಿ ಬ್ಯಾಂಕುಗಳ ನಿವೃತ್ತ ನೌಕರರ ಸಂಘದವರನ್ನು ಆಹ್ವಾನಿಸುತ್ತಿಲ್ಲ. ಹಲವು ಗಂಭೀರ ಕಾಯಿಲೆಗಳ ಚಿಕಿತ್ಸಾ ವೆಚ್ಚ 3 ಲಕ್ಷ ರೂಪಾಯಿಗಳನ್ನು ಮೀರಿದಲ್ಲಿ ಆ ವೆಚ್ಚದ ಶೇಕಡಾ 50 ರಷ್ಟು ಹಣವನ್ನು ಸಿಬ್ಬಂದಿಗಳ ಕಲ್ಯಾಣ ನಿಧಿಯಿಂದ ಕೇವಲ ಎಸ್‌ಬಿಐ ನಿವೃತ್ತರಿಗೆ ಮಾತ್ರ ನೀಡಲಾಗುತ್ತಿದೆ. ಈ ರೀತಿಯ ಹಲವಾರು ತಾರತಮ್ಯಗಳನ್ನು ಖಂಡಿಸಿ ತಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಎಸ್‌ಬಿಐ ಆಡಳಿತ ಮಂಡಳಿಯು ಈಡೇರಿಸಲು ಒತ್ತಾಯಿಸಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪೆನ್ಶನರ್ಸ್ ಕಮ್ಯೂನ್ ನ ಸದಸ್ಯರು ರಾಷ್ಟ್ರಾದ್ಯಂತ ಎಸ್‌ಬಿಐ ನ ಆಡಳಿತ ಕಛೇರಿಯ ಮುಂಭಾಗ ಪ್ರತಿಭಟನಾ ಧರಣಿ ನಡೆಯಲಿದೆ ಎಂದು ಸಂಘದ ಜಂಟಿ ಕಾರ್ಯದರ್ಶಿಯೂ ಆಗಿರುವ ಅಜಿತ್‌ಕುಮಾರ್ ನ್ಯಾಮತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಜಿತ್‌ಕುಮಾರ್ ನ್ಯಾಮತಿ

ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪೆನ್ಶನರ್ಸ್ ಕಮ್ಯೂನ್

ದಾವಣಗೆರೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!