ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಸಂಘಟನೆ ಕೊರತೆಯಿದೆ – ವಕೀಲ ಅಶೋಕ್ ಹಾರನಹಳ್ಳಿ

IMG-20211107-WA0145

ದಾವಣಗೆರೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಸಂಘಟನೆ ಕೊರತೆಯಿದ್ದು, ಇದಕ್ಕೆ ಸಂಘಟನಾ ಶಕ್ತಿ ತುಂಬಬೇಕೆಂಬ ಇಚ್ಛೆ ನನ್ನದಾಗಿದೆ‌. ಡಿ. 12ರಂದು ನಡೆಯುವ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಎಕೆಬಿಎಸ್‌ಗೆ ಹೊಸ ರೂಪ ಕೊಡಲು ಬದ್ಧನಾಗಿದ್ದೇನೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಂಗಾಮಿ ಅಧ್ಯಕ್ಷರು ಹಾಗೂ ಅಭ್ಯರ್ಥಿಯಾಗಿರುವ ಅಶೋಕ್ ಹಾರನಹಳ್ಳಿ ಭರವಸೆ ನೀಡಿದರು.

ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಬ್ರಾಹ್ಮಣ ಸಮಾಜ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಾನು ಹಂಗಾಮಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಅಲ್ಲಿನ ಸ್ಥಿತಿಗತಿ ನೋಡಿದಾಗ ಈ ಸಂಘಟನೆಯಲ್ಲಿ ಕೆಲವು ಮೂಲಭೂತ ಬದಲಾವಣೆ ಮಾಡುವ ಅವಶ್ಯಕತೆ ಅನ್ನಿಸಿತು. ಇದಕ್ಕೆ ಹೊಸ ರೂಪ ಕೊಡಬೇಕೆಂಬ ಇಚ್ಛೆಯಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ನಿರ್ಧಾರ ಮಾಡಿದೆ ಎಂದು ಹೇಳಿದರು.

ಗಾಯತ್ರಿ ಭವನ ಮತ್ತು ವನಿತೆಯರ ವಸತಿ ಕಟ್ಟಡ ಬೆಂಗಳೂರಿನ ಎಕೆಬಿಎಸ್‌ನ ನಿಯಂತ್ರಣದಲ್ಲಿವೆ. ಗಾಯತ್ರಿ ಭವನ ಕಟ್ಟಡದ ಕಾಮಗಾರಿ ನಡೆದು 3 ಮತ್ತು 4ನೇ ಮಹಡಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ನಾನು ಹಂಗಾಮಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಅದನ್ನು ಪೂರ್ಣಗೊಳಿಸಿದ್ದೇನೆ. ಅದೇ ರೀತಿ ವನಿತೆಯರ ವಸತಿ ನಿಲಯದಲ್ಲಿ ಅನೇಕ ಸಮಸ್ಯೆಗಳು ಇದ್ದವು. ಕೂಡಲೇ ಹೊನ್ನಾಪುರ ನೇತೃತ್ವದಲ್ಲಿ ಸಮಿತಿ ರಚಿಸಿದ್ದೆ. ಈಗ ಅಲ್ಲಿನ ಎಲ್ಲಾ ಸಮಸ್ಯೆಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ತಾವು ಅಧ್ಯಕ್ಷರಾಗಿ ಮುಂದುವರಿದರೆ ಇಡೀ ರಾಜ್ಯಾದ್ಯಂತ ವಿಪ್ರ ಸಮುದಾಯ ಸಂಘಟಿಸುವುದರೊಂದಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ಹೊಸ ಸ್ವರೂಪ ನೀಡಿ, ಸಮುದಾಯದ ಏಳ್ಗೆಗೆ ಶ್ರಮಿಸುತ್ತೇನೆ. ಇವರು ಸದಾ ಬ್ಯುಜಿಯಾಗಿರುವ ವ್ಯಕ್ತಿ. ಇವರು ಅಧ್ಯಕ್ಷರಾದರೆ ಎಕೆಬಿಎಸ್‌ನ ಸಂಘಟನೆ ಸಾಧ್ಯವೇ ಎಂದು ಸಮುದಾಯದ ಕೆಲವರು ಪ್ರಶ್ನಿಸುತ್ತಿದ್ದಾರೆ. ತಾವು ವಕೀಲ ವೃತ್ತಿಯಲ್ಲಿರುವುದರಿಂದ ಎಕೆಬಿಎಸ್ ಸಂಘಟನೆಗೆ ಸಹಾಯಕವಾಗುತ್ತದೆ. ಒಮ್ಮೆ ಅವಕಾಶ ಮಾಡಿಕೊಟ್ಟು ನೋಡಿ, ಕೆಲಸ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.

ದಾವಣಗೆರೆ ಬ್ರಾಹ್ಮಣ ಸಮಾಜ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಟಿ.ಅಚ್ಯುತ್‌ರಾವ್ ಮಾತನಾಡಿ, ಎಕೆಬಿಎಸ್‌ನಲ್ಲಿ ಸಾಕಷ್ಟು ತಪ್ಪು ಆಗಿದೆ. ಅದನ್ನು ತಿದ್ದಲು ಹೊರಟಿರುವುದು ಸಂತೋಷದ ಸಂಗತಿ. ವಕೀಲ ವೃತ್ತಿಯಲ್ಲಿ ಪರಿಣಿತಿ ಇರುವುದರಿಂದ ಅಶೋಕ್ ಹಾರನಹಳ್ಳಿ ಅವರು, ಸಂಘದ ಜವಾಬ್ದಾರಿ ವಹಿಸಿಕೊಳ್ಳಲು ಸರಿಯಾದ ವ್ಯಕ್ತಿಯಾಗಿದ್ದಾರೆ. ಡಿಸೆಂಬರ್ 12ರಂದು ನಡೆಯುವ ಚುನಾವಣೆಯಲ್ಲಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ವಿಪ್ರ ಸಮುದಾಯದಲ್ಲಿ ಸಾಕಷ್ಟು ಬಡವರಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ವಿವಾಹ ಮಾಡುವುದಕ್ಕೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪುರೋಹಿತರು, ಅಡುಗೆ ಭಟ್ಟರು ಹೀಗೆಯ ಸಮಾಜದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನೀವು ಅಧಿಕಾರ ತೆಗೆದುಕೊಂಡ ಮೇಲೆ ಗಮನ ಹರಿಸಬೇಕೆಂದು ಮನವಿ ಮಾಡಿದರು.

ದಾವಣಗೆರೆ ಬ್ರಾಹ್ಮಣ ಸಮಾಜ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಎಸ್.ಪಿ.ಸತ್ಯನಾರಾಣ ಮಾತನಾಡಿದರು. ಈ ಸಂದರ್ಭದಲ್ಲಿ ಗಿರೀಶ್, ಶ್ರೀಧರ್, ಶಶಿಕಾಂತ್, ಹೇಮಂತ್, ಅನಿಲ್ ಬಾರಂಗಳ್, ಅಶೋಕ್ ಭಟ್, ಉಮಾಕಾಂತ್ ದೀಕ್ಷಿತ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *

error: Content is protected !!