ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ – ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಾವಣಗೆರೆ: ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಮತ್ತು 2021ರೊಳಗೆ ಸರ್ಕಾರಿ ಕ್ಷೇತ್ರಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿಯಿಂದ ಸೋಮವಾರ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರದಿಂದ ತಡೆಹಿಡಿದ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ಈ ಕೂಡಲೇ ಪುನರ್ ಆರಂಭಿಸಿ. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿಗೊಳಿಸಬೇಕು, 2020ರಲ್ಲಿ ಆರಂಭವಾದ ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನೇಮಕಾತಿ ಪತ್ರವನ್ನು ನೀಡಬೇಕು, ಸರ್ಕಾರಿ ಐಟಿಐಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಬೋಧಕರ ಲಾಕ್ಡೌನ್ ಅವಧಿಯ ವೇತನವನ್ನು ಕೂಡಲೇ ಬಿಡುಗಡೆ ಮಾಡಿ ಹಾಗೂ ಸೇವಾಭದ್ರತೆ ಒದಗಿಸಬೇಕೆನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಪರಶುರಾಮ್, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 3ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಬಿದ್ದಿವೆ. ಖಾಲಿ ಆಗುತ್ತಲೇ ಇವೆ. ಶಿಕ್ಷಣ, ಆರೋಗ್ಯ, ವಸತಿ, ಇಂಧನ ಸೇರಿದಂತೆ ಮೂಲಭೂತ ವಲಯಗಳಲ್ಲಿ ಅವಶ್ಯಕ ಸಂಖ್ಯೆಯಲ್ಲಿ ನೇಮಕಾತಿಗಳು ನಡೆದಿಲ್ಲ. ಖಾಲಿ ಬಿದ್ದಿರುವ ಹುದ್ದೆಗಳ ಭರ್ತಿಗೆ ಯಾವುದೇ ಪ್ರಯತ್ನ ಮಾಡದೇ, ದಿನಗೂಲಿ, ಗುತ್ತಿಗೆ, ಅರೆ-ಗುತ್ತಿಗೆ, ಅತಿಥಿ ಮುಂತಾದ ಹೆಸರಿನಲ್ಲಿ ಪುಡಿಗಾಸಿಗೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರ್ಜಿ ಶುಲ್ಕದ ಮೂಲಕ ಹಣ ಸಂಗ್ರಹಿಸಲು ಎಂದೋ ನಡೆಯುವ ಅಲ್ಪಸ್ವಲ್ಪ ನೇಮಕಾತಿಯ ಪ್ರಹಸನ ನಿಧಾನಗತಿಯಲ್ಲಿ ಸಾಗುತ್ತಿದೆ. 2016ರಿಂದ 2021ರವರೆಗೂ ರಾಜ್ಯದ ವಿವಿಧ ಇಲಾಖೆಯಲ್ಲಿ ನೇಮಕಾತಿಗಾಗಿ ಸುಮಾರು 19 ಭಾರಿ ಅಧಿಸೂಚನೆ ಹೊರಬಿದ್ದು ಆಯ್ಕೆ ಪ್ರಕ್ರಿಯೆಯೂ ಮುಗಿದಿವೆ.
ಆದರೆ ಯಾರಿಗೂ ನೇಮಕಾತಿ ಆದೇಶ ಪತ್ರ ಕೈಗೆ ಸಿಕ್ಕಿಲ್ಲ. ಅಲ್ಲದೇ 2019-20ರಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಕರೆದು, ಕಳೆದ ಫೆ. 28ರಂದು ಪರೀಕ್ಷೆ ನಡೆಸಿದ್ದಾರೆ. ಇಲ್ಲಿಯವರೆಗೂ ಫಲಿತಾಂಶ ಬಂದಿಲ್ಲ. ಹಾಗೂ 2019-20ರಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಕರೆದು ಇನ್ನೂ ಪರೀಕ್ಷೆ ನಡೆಸಿಲ್ಲ ಎಂದು ಕಿಡಿಕಾರಿದರು.
ಆರೋಗ್ಯ ಕ್ಷೇತ್ರದಲ್ಲಿ ಬಿಎಸ್ಸಿ, ನರ್ಸಿಂಗ್, ಪ್ಯಾರಾಮೆಡಿಕಲ್, ಫಾರ್ಮಸಿ, ಕೋರ್ಸ್ ಮುಗಿಸಿ, ಗುತ್ತಿಗೆ ಹೊರಗುತ್ತಿಗೆ ಆಧಾರದಲ್ಲಿ ಪುಡಿಗಾಸಿಗೆ ದುಡಿಯುತ್ತಿದ್ದಾರೆ. ಕೊರೋನ ಅವಧಿಯಲ್ಲಂತೂ ಇವರು ಜೀವಪಣಕ್ಕಿಟ್ಟು ದುಡಿದಿದ್ದಾರೆ. ಇವರ ಸೇವೆಯು ಯಾವ ಕಾರಣಕ್ಕೂ ಮರೆಯುವಂತದ್ದಲ್ಲ.
ಹೃದಯಹೀನ ಸರ್ಕಾರ ಕೊರೋನ ನಂತರ ಅವರನ್ನು ಕೆಲಸದಿಂದ ಕೈ ಬಿಡುತ್ತಿದೆ. ಇನ್ನು ಅತಿಥಿ ಉಪನ್ಯಾಸಕರದ್ದು ಉದ್ಯೋಗದ ಭದ್ರತೆ ಇಲ್ಲ. ದುಡಿದ ಸಂಬಳ ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಇನ್ನು ಕಟ್ಟಡ ಕಾರ್ಮಿಕರು- ಸಣ್ಣಪುಟ್ಟ ಮನೆಗಳಿಂದ ಹಿಡಿದು, ದೊಡ್ಡ ದೊಡ್ಡ ಬಂಗಲೆ, ಊರು-ಪಟ್ಟಣ- ನಗರಗಳನ್ನೇ ನಿರ್ಮಿಸುವವರು ಯಾವುದೋ ಜೋಪಡಿಗಳಲ್ಲಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇವರ ಹಿತ ಕಾಪಾಡಲೆಂದು ಇರುವ ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ಭ್ರಷ್ಟಾಚಾರದ ಮೂಲಕ ಪೋಲಾಗುತ್ತಿದೆ ಹಾಗೂ ಸರ್ಕಾರದ ಯಾವ್ಯಾವುದೋ ಯೋಜನೆಗಳಿಗೆ ಬಳಕೆಯಾಗುತ್ತಿದೆ.
ಕಟ್ಟಡ ಕಾರ್ಮಿಕರಿಗೆ ಘೋಷಿಸಿರುವ ಯಾವ ಸವಲತ್ತುಗಳು ಅವರಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದರು.ಸರ್ಕಾರ ಉದ್ಯೋಗ ಸೃಷ್ಟಿಗಾಗಿ ಬಂಡವಾಳ ಹೂಡುವುದನ್ನು ನಿಲ್ಲಿಸಿ ಯಾವುದೋ ಕಾಲವಾಗಿದೆ. ಇನ್ನೊಂದೆಡೆ ವ್ಯಾಪಕ ಖಾಸಗೀಕರಣ ಪ್ರಕ್ರಿಯೆ ನಡೆಯುತ್ತಿದೆ.
ಈ ಎಲ್ಲಾ ಕಾರಣಗಳಿಂದಾಗಿ ನಿರುದ್ಯೋಗವು ಭೂತಾಕಾರವಾಗಿ ಬೆಳೆದು, ಇಡೀ ದೇಶದ ಸಂಪತ್ತನ್ನು ಸೃಷ್ಟಿಸುವ ದುಡಿಯುವ ಕೈಗಳು ಆತ್ಮಹತ್ಯೆಗೆ ಮೊರೆಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ಎಚ್ಚೆತ್ತು ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಯುವ ಶಕ್ತಿಯನ್ನು ಸರಿಯಾದ ದಾರಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಾಗರಾಜ್ ಅಮಿತ್, ಸಂತೋಷ್, ಗುರು ಪಾಲ್ಗೊಂಡಿದ್ದರು.
