ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳದ ಆದೇಶ ಹಿಂಪಡೆಯಲು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಶಿಕ್ಷಣ ಸಚಿವರಿಗೆ ಮನವಿ

ದಾವಣಗೆರೆ: ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳಕ್ಕಾಗಿ ನೀಡಿರುವ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಸಂಘಟನೆ ವತಿಯಿಂದ ಶನಿವಾರ ಉಪ ವಿಭಾಗಾಧಿಕಾರಿಗಳ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್ ಪ್ರವೇಶಾತಿ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟುಗಳ ಮೇಲೆ ಏಕಾಏಕಿ ೧೦ ಸಾವಿರದ ವರೆಗೆ ಶುಲ್ಕ ಏರಿಕೆ ಮಾಡಿದ್ದು, ತಕ್ಷಣವೇ ನಿರ್ಧಾರವನ್ನು ಹಿಂಪಡೆಯಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
!
ಈಗಾಗಲೇ ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿದಿದ್ದು, ಮೊದಲ ಸುತ್ತಿನ ಸೀಟು ಹಂಚಿಕೆ ಆಗಿದೆ. ಈ ದಿಢೀರನೆ ಶುಲ್ಕ ಹೆಚ್ಚಳ ಮಾಡಿರುವುದು ವಿದ್ಯಾರ್ಥಿ ವಿರೋಧಿ ಮಾತ್ರವಲ್ಲದೇ, ಕಾನೂನು ಬಾಹಿರ ನಡೆಯಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಜನರು ಈಗಾಗಲೇ ಕೋವಿಡ್ ಸಾಂಕ್ರಾಮಿಕದಿಂದ ನಲುಗಿ ಹೋಗಿದ್ದು, ಆರ್ಥಿಕವಾಗಿ ಕಂಗೆಟ್ಟಿದ್ದಾರೆ. ಇಂತಹ ಹೊತ್ತಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಳ ಮಾಡಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೇ, ಅಲ್ಲದೇ, ಶಿಕ್ಷಣದಿಂದ ಹಿಂದೆ ಸರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಸರ್ಕಾರ ಶುಲ್ಕ ಹೆಚ್ಚಳದ ನಿರ್ಧಾರದಿಂದ ಹಿಂದೆ ಸರಿದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕಿದೆ ಎಂದರು.
ಅಲ್ಲದೇ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದಿನಕ್ಕೆ ೧೦ ಗಂಟೆಯ ಪಾಠ ಮಾಡುವುದಾಗಿ ಘೋಷಿಸಿರುವ ನಿರ್ಧಾರವನ್ನು ಉಪನ್ಯಾಸಕರ ಮತ್ತು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಹಿಂಪಡೆದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೂಜಾ ನಂದಿಹಳ್ಳಿ, ಕಾವ್ಯ, ಮಧುಸೂದನ್, ದರ್ಶನ್ ಇದ್ದರು.