9ನೇ ಶೆಡ್ಯೂಲ್ನಲ್ಲಿ ಸೇರಿಸಿದರೆ ಮಾತ್ರ ಮೀಸಲಾತಿ ಹೆಚ್ಚಳಕ್ಕೆ ಮಾನ್ಯತೆ: ಸಿದ್ದರಾಮಯ್ಯ
ಬೆಂಗಳೂರು: 9ನೇ ಶೆಡ್ಯೂಲ್‌ನಲ್ಲಿ ಸೇರಿದರೆ ಮಾತ್ರ ಮೀಸಲಾತಿ ಹೆಚ್ಚಳಕ್ಕೆ ಮಾನ್ಯತೆ ಸಿಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಎಸ್‌ಸಿ ಮೀಸಲಾತಿ ಶೇ 15ರಿಂದ 17ಕ್ಕೆ, ಎಸ್‌ಟಿ ಮೀಸಲಾತಿ 3ರಿಂದ 6ಕ್ಕೆ ಹೆಚ್ಚಿಸಿರುವ ನಿರ್ಣಯವನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸಬೇಕಿದೆ ಎಂದವರು ಹೇಳಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಲು ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ಸಮಿತಿ ರಚಿಸಿದ್ದೆವು.
2020ರಲ್ಲಿ ಅವರು ವರದಿ ನೀಡಿದರು. ಆ ಸಂದರ್ಭ ಬಿಜೆಪಿ ಸರ್ಕಾರವಿತ್ತು. ಯಡಿಯೂರಪ್ಪ ಸಿಎಂ ಆಗಿದ್ದರು. 257 ದಿನಗಳ ಕಾಲ ವಾಲ್ಮೀಕಿ ಸ್ವಾಮೀಜಿ ಮೀಸಲಾತಿಗಾಗಿ ಧರಣಿ ನಡೆಸಿದ್ದರು. 3 ವರ್ಷ ವರದಿಯನ್ನು ಇಟ್ಟುಕೊಂಡು ಸರ್ಕಾರ ಕುಳಿತಿದ್ದೇಕೆ? ಅವರಿಗೆ ಸಾಮಾಜಿಕ ನ್ಯಾಯದ ಬಗ್ಗ ಬದ್ಧತೆ ಇದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಎಸ್‌ಸಿ ಮೀಸಲಾತಿ ಶೇ 15ರಿಂದ 17ಕ್ಕೆ, ಎಸ್‌ಟಿ ಮೀಸಲಾತಿ 3ರಿಂದ 6ಕ್ಕೆ ಹೆಚ್ಚಿಸಲು ನಾವು ಸಲಹೆ ನೀಡಿದ್ದೆವು. 9ನೇ ಶೆಡ್ಯೂಲ್‌ನಲ್ಲಿ ಮೀಸಲಾತಿ ಹೆಚ್ಚಳವನ್ನು ಸೇರಿಸದಿದ್ದರೆ ಅದಕ್ಕೆ ಮಾನ್ಯತೆ ಇರುವುದಿಲ್ಲ. ಇಡಬ್ಲ್ಯುಎಸ್ ಮೀಸಲಾತಿಗೆ ಸಂವಿಧಾನ ತಿದ್ದುಪಡಿ ಮಾಡಿದ ರೀತಿಯೇ ಇದಕ್ಕೂ ಮಾಡಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.