ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ರವರ ಆದರ್ಶ ಸ್ಮರಣೀಯ ಶಾಸಕ ಎಸ್ ಎ ರವೀಂದ್ರನಾಥ್

ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ರವರ ಆದರ್ಶ ಸ್ಮರಣೀಯ : ಶಾಸಕ ಎಸ್.ಎ.ರವೀಂದ್ರನಾಥ್
ದಾವಣಗೆರೆ: ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆಗಳನ್ನು ಪ್ರತಿಪಾದಿಸುವುದರೊಂದಿಗೆ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಡಿದ ಅಂಬೇಡ್ಕರ್ ಅವರು ಮೊದಲ ಬಾರಿಗೆ ದೇಶಕ್ಕೆ ಡಾಕ್ಟರೇಟ್ ಪದವಿ ತಂದುಕೊಟ್ಟು, ತ್ರೀವರ್ಣ ಧ್ವಜದಲ್ಲಿ ಅಶೋಕ ಚಕ್ರ ಸ್ಥಾಪಿಸುವಲ್ಲಿ ಮಾರ್ಗದರ್ಶನ ಮಾಡಿದ ಚಿಂತನಕಾರ ಎಂದು ದಾವಣಗೆರೆ ಉತ್ತರ ವಲಯದ ಶಾಸಕ ಎಸ್.ಎ.ರವೀಂದ್ರನಾಥ್ ತಿಳಿಸಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ.ಬಾಬು ಜಗಜೀವನ ರಾಂ ಅವರ 114ನೇ ಜಯಂತ್ಯೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಸಂವಿಧಾನದ ಮೂಲಕ ಎಲ್ಲಾ ವರ್ಗದವರಿಗೂ ಸಮಾನತೆ ದೊರಕಿಸಿ, ಕಾರ್ಮಿಕರ 12 ಗಂಟೆಯ ಕೆಲಸದ ಅವಧಿಯನ್ನು 8 ಗಂಟೆಗೆ ಕಡಿತಗೊಳಿಸಿದರು. ಹಾಗೂ ದುಡಿಯುವ ಗರ್ಭಿಣಿ ಹೆಂಗಸರಿಗೆ 3 ತಿಂಗಳ ಹೆರಿಗೆ ರಜೆ ಅವಧಿಯನ್ನು ಘೋಷಿಸಿದ ಚಿಂತಕ ಅಂಬೇಡ್ಕರ್ ಅವರು ಎಂದು ತಿಳಿಸಿದ ಅವರು ಒಟ್ಟು 64 ವಿಷಯಗಳಲ್ಲಿ ಪರಿಣಿತರಾಗಿದ್ದು 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ವಾಕ್ಪಟು ಆಗಿದ್ದರು.
ಇಂತಹ ಮೇರು ನಾಯಕನಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಭವನ ನಿರ್ಮಾಣಕ್ಕೆ ಆರ್.ಟಿ.ಒ ಆಫೀಸ್ ಬಳಿ ಜಾಗ ಗುರುತಿಸಿದ್ದು ಸಂಘಟನೆಗಳು ಒಪ್ಪಿಕೊಂಡಿರುತ್ತಾರೆ. ಮೇ ತಿಂಗಳ ಅಂತ್ಯದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಶಂಕು ಸ್ಥಾಪನೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಬಾಬು ಜಗಜೀವನರಾಂ ಅಪ್ರತಿಮ ಸಂಘಟನಕಾರರು. ಇವರ ಪರಿಶ್ರಮದ ಫಲವಾಗಿ ದೇಶ ಇಂದು ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಗಿದೆ. ಐದು ದಶಕಗಳ ಕಾಲ ಸಂಸದರಾಗಿದ್ದ ಜಗ ಜೀವನರಾಂ ಅವರು ರೈತರ ಆಹಾರ ಉತ್ಪಾದನೆಯ ಹೆಚ್ಚಾಳಕ್ಕೆ ಕಾರಣರಾಗಿದ್ದರು. ಹಾಗೂ ತಮಗೆ ದೊರೆತ ಕಾರ್ಮಿಕ, ಕೃಷಿ ರಕ್ಷಣಾ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು ಎಂದರು.
ನಿವೃತ್ತ ಪ್ರಾಧ್ಯಾಪಕರು ಹಾಗೂ ಅಂಬೇಡ್ಕರ್ ವಿಚಾರಧಾರೆಗಳ ಚಿಂತಕರಾದ ಟಿ.ರಾಜಪ್ಪ ಮಾತನಾಡಿ, ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಂ ಈ ದೇಶದ ಅಪರೂಪದ ವ್ಯಕ್ತಿತ್ವಗಳು. ಜ್ಞಾನದ ಸಂಕೇತ. ಅವರೊಂದು ವಿಶ್ವಕೋಶ, ಪರ್ವತ, ಸಾಗರ, ಸರೋವರ. ಅಂತರಾಷ್ಟ್ರೀಯ ಮಟ್ಟದಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಸಮಾನತೆಯ ದಿನ ಹಾಗೂ ವಿಶ್ವಸಂಸ್ಥೆ ಅವರ ಜನ್ಮ ದಿನವನ್ನು ವಿಶ್ವ ಜ್ಞಾನದಿನವನ್ನಾಗಿ ಆಚರಿಸಲು ಕರೆ ನೀಡಿದೆ. ಆಸ್ಟ್ರೇಲಿಯಾ ದೇಶ ಇವರ ಸ್ಮರಾಣಾರ್ಥ ಗ್ರಂಥಾಲಯ ನಿರ್ಮಾಣ ಮಾಡಿದೆ. ಸಾರ್ವತ್ರಿಕ ಮತದಾನದ ಮಹತ್ವವನ್ನು ಸಂವಿಧಾನದ ಮೂಲಕ ಪರಿಚಿಸದವರು. ನಾವು ಚಲಾಯಿಸುವ ಮತ ನಮ್ಮ ಮಗಳಿಗೆ ಸಮಾನ. ನಾವು ನಮ್ಮ ಮಗಳನ್ನು ಹೇಗೆ ಮಾರಿಕೊಳ್ಳುವುದಿಲ್ಲವೋ ಹಾಗೆ ನಮ್ಮ ಮತವನ್ನು ಮಾರಿಕೊಳ್ಳಬಾರದೆಂದು ಮತದಾನಕ್ಕಿರುವ ಮಹತ್ವವನ್ನು ತಿಳಿಸಿದರು.
ಎಲ್ಲಾ ತಳ ಸಮುದಾಯಗಳ ಸಂಘಟನೆಗೆ ಹೋರಾಡಿದ ಮಹಾನ್ ಚೇತನ. ಇಡೀ ವಿಶ್ವವೇ ಗೌರವಿಸುವಂತಹ ಇಂತಹ ವ್ಯಕ್ತಿ ಗಾಯಕವಾಡದ ಅರಮನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರು ಅವರಿಗೆ ವಾಸಿಸಲು ಒಂದು ಕೋಣೆ ಬಾಡಿಗೆಗೆ ಸಿಗದಿದ್ದುದು ಈ ದೇಶದ ದುರಂತ. ನನ್ನಂತಹವನಿಗೆ ಈ ಸ್ಥಿತಿ ಆದರೆ ಗ್ರಾಮೀಣ ಭಾಗದಲ್ಲಿರುವವರ ಅಸ್ಪøಶ್ಯರ ಪರಿಸ್ಥಿತಿ ಹೇಗಿರಬೇಡ ಎಂದು ನೊಂದುಕೊಳ್ಳುತ್ತಿದ್ದರು. ಒಮ್ಮೆ ಗಾಂಧೀಜಿಯವರು ನೀವು ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ವಿರೋಧಿಸುತ್ತೀರೆಂದಾಗ ಹೌದು ಶಿಕ್ಷಣ ಅಲಭ್ಯವಾದ, ದೇವಸ್ಥಾನವನ್ನು ಪ್ರವೇಶವಿಲ್ಲದ, ಇಲ್ಲಿನ ನೀರು ಕುಡಿಯಲು ಸಿಕ್ಕದೆ ಸ್ವಾತಂತ್ರ್ಯ ಸಿಕ್ಕರೆಷ್ಟು ಬಿಟ್ಟರೆಷ್ಟು ಎಂದಿದ್ದರು.
ಪ್ರತಿ ಪ್ರಜೆಯು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣದಿಂದ ಏನನ್ನಾದರೂ ಸಾಧಿಸುವುದಕ್ಕೆ ಸಾಧ್ಯ. ಅಸ್ಪøಶ್ಯತೆ ವಿರುದ್ಧ ಹೋರಾಡಿ ಸಮಾನತೆ ಸಮಾಜಕ್ಕಾಗಿ ಶ್ರಮಿಸಿದವರು. ಅವರೊಬ್ಬ ಕಾನೂನು ಹಾಗೂ ಅರ್ಥಶಾಸ್ತ್ರದ ಪರಿಣಿತರು. ಹಾಗಾಗಿ ಅವರನ್ನು ಆರ್ಥಿಕ ತಜ್ಞ ಎಂದು ಕರೆಯತ್ತೇವೆ. ಜಾತಿ ಪದ್ಧತಿಯ ವಿರುದ್ಧ ನಿರಂತರವಾಗಿ ಹೋರಾಡಿದವರು. ಅವರಂತೆಯೇ ಬಾಬು ಜಗಜೀವನ ರಾಂ ದೇಶದ ಉಪ ಪ್ರಧಾನಿಯಾಗಿ ಹಾಗೂ ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಹೆಚ್ಚು ಒತ್ತು ನೀಡಿ ಆಹಾರ ಉತ್ಪಾದನೆಗೆ ಶ್ರಮಿಸಿದ್ದರು. ಇಂತಹವರನ್ನು ಜಾತಿಯ ಭೂತ ಬಿಡಲೇಯಿಲ್ಲ. ಒಮ್ಮೆ ತಾವು ಈ ಹಿಂದೆ ವಿದ್ಯಾಭ್ಯಾಸ ಮಾಡಿದ್ದ ಬನಾರಸ್ ಹಿಂದು ವಿಶ್ವವಿದ್ಯಾಲಯಕ್ಕೆ ಮಹಾನೀಯರ ಪುತ್ಥಳಿಯೊಂದರ ಅನಾವರಣಕ್ಕೆ ಹೋದಾಗ ಕಾರ್ಯಕ್ರಮ ಮುಗಿಸಿ ಹೊರಬಂದಾಗ ಅಲ್ಲಿಯ ಸಿಬ್ಬಂದಿ ಆ ಪ್ರದೇಶವನ್ನ ಮತ್ತೊಮ್ಮೆ ಶುಚಿಗೊಳಿಸಿದ್ದು ಅವರ ಜಾತಿ ವ್ಯವಸ್ಥೆಯ ಮನಸ್ಥಿತಿಗೆ ಹಿಡಿದ ಕನ್ನಡಿಯಾಗುತ್ತದೆ. ಹಾಗಾಗಿ ಇಂತ ಇಬ್ಬರು ಮಹಾನೀಯರ ತತ್ವದರ್ಶಗಳನ್ನ ಮೈಗೂಡಿಸಿಕೊಂಡಾಗ ಮಾತ್ರ ಸಮಸಮಾಜದ ನಿರ್ಮಾಣವಾಗಲಿದೆ ಎಂದರು.
ಮಹಾಪೌರರಾದ ಎಸ್.ಟಿ.ವೀರೇಶ್ ಮಾತನಾಡಿ,ಅಂಬೇಡ್ಕರ್ ಅವರು ಇಡೀ ದೇಶದ ವಿಶ್ವಕೋಶ. ಅವರಲ್ಲಿದ್ದ ಜ್ಞಾನದಿಂದ ದೇಶಕ್ಕಾಗಿ, ಸಮಾಜಕ್ಕಾಗಿ ಹೋರಾಟ ಮಾಡಿದವರು. ಸಮಸ್ಯೆಗಳನ್ನು ಮಾತ್ರ ಬಿಂಬಿಸದೆ ಪರಿಹಾರವನ್ನು ಸಹ ಸಂವಿಧಾನದ ಮೂಲಕ ತಿಳಿಸಿದರು. ಮಹಾನ್ ವ್ಯಕ್ತಿತ್ವದ ಚಿಂತಕರು. ಇಂತಹವರ ವಿಚಾರ ಆದರ್ಶಗಳನ್ನು ದಿನನಿತ್ಯ ಪಾಲನೆ ಮಾಡಬೇಕು. ಸಂವಿಧಾನವನ್ನು ಅರಿತ ಅಧಿಕಾರಿಗಳು ಶೋಷಿತ ವರ್ಗದವರಿಗೆ, ದಲಿತ ವರ್ಗದವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನಿಗದಿತ ಸಮಯದಲ್ಲಿ ದೊರಕಿಸಿ ಅವರ ಸೇವೆಗೆ ಪಾತ್ರರಾದರೆ ಸಂವಿಧಾನಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ತಾ.ಪಂ ಸದಸ್ಯ ಆಲೂರು ಲಿಂಗರಾಜು ಮಾತನಾಡಿ, ಸಮಾಜದ ಪರಿವರ್ತನೆಗೆ, ಏಳಿಗೆಗೆ, ಶೋಷಿತ ವರ್ಗದವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಅನೇಕ ಹೋರಾಟಗಳನ್ನು ಮಾಡುತ್ತಾ ತಮ್ಮ ಜೀವನವನ್ನೇ ಪಣಕ್ಕಿಟ್ಟಂತಹ ಮಹಾನ್ ವ್ಯಕ್ತಿ ಅಂಬೇಡ್ಕರ್ ಎಂದ ಅವರು ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಶೀಘ್ರ ಆಗಲಿ ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಲು ದೂರದರ್ಶಿತ್ವ ಹೊಂದಿದ್ದ ಮಹಾನ್ ನಾಯಕ ಅಂಬೇಡ್ಕರ್ ಅವರು. ಅವರು ನೀಡಿದ ಸಂವಿಧಾನದ ಆಶಯ ಎಲ್ಲಾರಿಗೂ ದೊರೆಯುವುದು. ಕೊರೊನ ಹಿನ್ನೆಲೆಯಲ್ಲಿ ಈರ್ವರ ಜಯಂತಿಯನ್ನು ಸರಳವಾಗಿ ಆದರೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಮೇ ಅಂತ್ಯಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ರ ಭವನಕ್ಕೆ ಶಂಕು ಸ್ಥಾಪನೆ ನೆರವೇರಲಿದೆ ಎಂದರು.
ಈ ವೇಳೆ ಹೆಗ್ಗೆರೆ ರಂಗಪ್ಪ ಹಾಗೂ ಐರಣಿ ಚಂದ್ರು ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮತ್ತು ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಬಗೆಗೆ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಶಾಲಾ ಮಕ್ಕಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ ಉತ್ತರ ವಲಯದ ಶಾಸಕ ಎಸ್.ಎ.ರವೀಂದ್ರನಾಥ್, ಡಾ.ಹೆಚ್.ವಿಶ್ವನಾಥ್ ಹಸಿರು ಕ್ರಾಂತಿ ಹರಿಕಾರ ಬಾಬು ಜಗ ಜೀವನರಾಂ ಬಗೆಗೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಶಾಸಕರಾದ ಪ್ರೋ.ಲಿಂಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ಜಿ.ಪಂ. ಉಪಾಧ್ಯಕ್ಷರಾದ ಸಾಕಮ್ಮ ಗಂಗಾಧರ್ ನಾಯಕ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರಪ್ಪ, ಜಿ.ಪಂ ಸದಸ್ಯ ತೇಜಸ್ವಿ ಪಟೇಲ್, ಜಿ.ಪಂ ಸದಸ್ಯ ಬಸವಂತಪ್ಪ, ತಾ.ಪಂ ಸದಸ್ಯ ಆಲೂರು ಲಿಂಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಡಿಸಿ ಪೂಜಾರ್ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೌಸರ್ ರೇಷ್ಮಾ, ಜಿ.ಪಂ.ಉಪಕಾರ್ಯದರ್ಶಿ ಆನಂದ್ ಇದ್ದರು.
