ಅಂಬೇಡ್ಕರ್ ಜಯಂತಿಗೆ ನೀತಿ ಸಂಹಿತೆ ಅಡ್ಡಿಯಾಗದಿರಲಿ: ಸೂರ್ಯ ಪ್ರಕಾಶ್
ದಾವಣಗರೆ: ಚುನಾವಣಾ ನೀತಿಸಂಹಿತೆ ಹೆಸರಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿಯನ್ನು ನಿರ್ಲಕ್ಷಿಸಬಾರದು. ಏ.14ರಂದು ಅಂಬೇಡ್ಕರ್ ಜಯಂತಿಯನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು ಎಂದು ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಆರ್. ಸೂರ್ಯಪ್ರಕಾಶ್ ಕೋರಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಏ. 14ರಂದು ದೇಶದ ಎಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ , ಸಾರ್ವಜನಿಕ ಕೈಗಾರಿಕಾ ಸಂಸ್ಥೆಗಳಿಗೆ ರಜೆ ಘೋಷಿಸಲಾಗುತ್ತದೆ. ಆದರೆ, ಅಧಿಕಾರಿ, ನೌಕರರು ಮಾತ್ರ ಕಾರ್ಯಕ್ರಮಕ್ಕೆ ಬರುವುದಿಲ್ಲ. ಶಾಲಾ ಕಾಲೇಜುಗಳು ರಜೆ ಇರುವುದರಿಂದ ಮಕ್ಕಳು ಸಹ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಬರುವುದಿಲ್ಲ . ಎಲ್ಲರೂ ಕಡ್ಡಾಯವಾಗಿ ಹಾಜರಿದ್ದು ಅಂಬೇಡ್ಕರ್ ಜಯಂತಿ ಆಚರಿಸುವಂತೆ ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಅಂಬೇಡ್ಕರ್ ಜಯಂತಿ ಆಚರಣೆಗೆ ಚುನಾವಣಾ ನೀತಿಸಂಹಿತೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು . ಸಾರ್ವಜನಿಕರಲ್ಲಿ ಈ ಕುರಿತು ಮಾಹಿತಿ ನೀಡಿ ಎಲ್ಲೆಡೆ ಅಂಬೇಡ್ಕರ್ ಜಯಂತಿ ಆಚರಣೆಯಾಗುವಂತೆ ಮಾಡಬೇಕು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಭೀಮ್ ಸೇನೆ ಸಂಘಟನೆಯಿಂದ ಅಂದು ನಗರದ ಗಾಂಧಿ ವೃತ್ತದಿಂದ ಪಿ.ಬಿ. ರಸ್ತೆ , ಎವಿಕೆ ಕಾಲೇಜು ರಸ್ತೆ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಪಥಸಂಚಲನ ನಡೆಸಲಾಗುವುದು.
ಅಂಬೇಡ್ಕರ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿ , ಮಾಲಾರ್ಪಣೆ ಸಹ ಮಾಡಲಾಗುವುದು ಎಂದರು.
ಸಂಘಟನೆಯ ಪ್ರಮುಖರಾದ ಮಂಜುನಾಥ್, ಎನ್. ಸಂತೋಷ್, ಬಿ.ಮಂಜುನಾಥ್, ರಾಘವೇಂದ್ರ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು