ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ: ಅಂಬೇಡ್ಕರ್ ಓದಿನಿಂದ ಜಾಗೃತಿ

ಚಿತ್ರದುರ್ಗ: ಅಂಬೇಡ್ಕರ್ ಓದು ನಮ್ಮನ್ನು ಎಚ್ಚರ, ಜಾಗೃತಿ ಹಾಗೂ ಪ್ರಜ್ಞಾವಂತರನ್ನಾಗಿ ಮಾಡುತ್ತದೆ ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ನಗರದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೋವು, ಅವಮಾನ, ಅಸಮಾನತೆ, ಶೋಷಣೆ, ಸಮಸ್ಯೆ, ಸಂಕಟಗಳಿಗೆ ಒಳಗಾದವರಿಗೆ ಅಂಬೇಡ್ಕರ್ ಓದು ಎಚ್ಚರವಾಗಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ದಾರ್ಶನಿಕ ಅಂಬೇಡ್ಕರ್ ಓದು ವಿದ್ಯಾರ್ಥಿಗಳು ಅಧ್ಯಯನಶೀಲರನ್ನಾಗಿ ಮಾಡಲು ತುಂಬಾ ಸಹಕಾರಿಯಾಗಲಿದೆ. ಅವರು ಅನುಭವಿಸಿದ ನೋವುಗಳನ್ನು ವಾಸ್ತಾವಿಕವಾಗಿ ದಾಖಲು ಮಾಡಿದ್ದು, ನೋವುಂಟ ವ್ಯಕ್ತಿ ವಿಶ್ವಮಾನ್ಯರಾಗಿದ್ದಾರೆ. ಅನೇಕ ರಾಷ್ಟ್ರಗಳಿಗೆ, ಸಾಧಕರಿಗೆ ಅಂಬೇಡ್ಕರ್ ಓದು ಸ್ಫೂರ್ತಿ ಹಾಗೂ ಪ್ರೇರಕರಾಗಿದ್ದಾರೆ ಎಂದು ಹೇಳಿದರು.
ವಿಶ್ವಮಾನ್ಯರಾದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ತತ್ವ ಸಿದ್ದಾಂತಗಳನ್ನು ಬೇರೆ ಬೇರೆ ರಾಷ್ಟ್ರಗಳು ತಮ್ಮ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿವೆ ಎಂದರು.
ಅಂಬೇಡ್ಕರ್ ಅಂದಕ್ಷಣ ಮೀಸಲಾತಿ, ಸಂವಿಧಾನ ಮತ್ತು ದಲಿತರು ಎಂಬುದಾಗಿ ಹೇಳುತ್ತಾರೆ. ಅಂಬೇಡ್ಕರ್ ಕುರಿತಾಗಿ ಕೇವಲ ನಾಲ್ಕೈದು ವಿಷಯಗಳು ಮಾತ್ರ ಗೊತ್ತು. ಪ್ರಸ್ತುತ ಅಂಬೇಡ್ಕರ್ ಓದು ವಿದ್ಯಾರ್ಥಿಗಳನ್ನು ಅಧ್ಯಯನ ಶೀಲರನ್ನಾಗಿ ಮಾಡುವ ಹಾಗೂ ನಮ್ಮೆಲ್ಲರ ಪ್ರಜ್ಞೆ ಎಚ್ಚರಗೊಳಿಸುವಂತಹ ಅಂಬೇಡ್ಕರ್ ಬದುಕು ಎಲ್ಲರಿಗೂ ಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಆನ್‍ಲೈನ್ ಗೆಮ್, ವಾಟ್ಸ್‍ಆಪ್, ಫೇಸ್‍ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುತ್ತಾರೆ. ಇಂತಹ ಸಾಮಾಜಿಕ ಜಾಲತಾಣಗಳಿಗೆ ಸಮಯ ನೀಡದೇ, ತಮ್ಮ ಅಮೂಲ್ಯ ಸಮಯವನ್ನು ಓದು, ಸಂಶೋಧನೆ, ಅಧ್ಯಯನ, ಬದುಕು ಹಾಗೂ ಭರವಸೆಯ ಕಡೆ ಸಮಯ ಕೊಡಬೇಕು. ಅಂಬೇಡ್ಕರ್ ಅವರು ಬಾಲ್ಯದಿಂದ ಯೌವನದವರೆಗೆ ಅನುಭವಿಸಿದ ನೋವುಗಳೇ ಅವರನ್ನು ಮಹಾನ್ ವ್ಯಕ್ತಿಯನ್ನಾಗಿಸಿದೆ. ಭಗವಾನ್ ಬುದ್ಧನ ತತ್ವ-ಚಿಂತನೆಗಳು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ತುಂಬಾ ಆಕರ್ಷಿಸಿದವು. ಬುದ್ಧನನ್ನು ಅಂಬೇಡ್ಕರ್ ಅವರು ಒಂದು ಭಾಗವಾಗಿ ಸ್ವೀಕರಿಸಿದರು ಎಂದು ಹೇಳಿದರು.
ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಜಂಟಿನಿರ್ದೇಶಕರಾದ ಹೆಚ್.ಮಂಜುನಾಥ್ ಮಾತನಾಡಿ, ಅಂಬೇಡ್ಕರ್ ಓದುವಿನಿಂದ ಜೀವನ ರೂಪಿಸಿಕೊಳ್ಳುವುದು, ವೈಚಾರಿಕ ಚಿಂತನೆ ಹಾಗೂ ಪ್ರಜ್ಞೆ ಎಚ್ಚರಿಸಲು ಸಹಕಾರಿಯಾಗಲಿದೆ. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಅವರು ನಮ್ಮ ನಿಜವಾದ ಹಿರೋಗಳು ಇಂತಹ ಮಹಾನ್ ನಾಯಕರು ನಮ್ಮೆಲ್ಲರಿಗೂ ಮಾದರಿ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ, ಅಂಬೇಡ್ಕರ್ ಓದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ 10 ಕಡೆಗಳಲ್ಲಿ ಆಯೋಜಿಸಲಾಗುತ್ತಿದೆ. ಯುವ ಸಮುದಾಯಕ್ಕೆ ಅಂಬೇಡ್ಕರ್ ಓದು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಓದುದ ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್ ಬದುಕು ಮತ್ತು ಸಾಧನೆ ಕುರಿತು ರಸಪ್ರಶ್ನೆ, ಪ್ರಬಂಧ, ಆಶುಭಾಷಣ, ಕವನ ವಾಚನ ಸ್ಪರ್ಧೆಯಲ್ಲಿ ವಿಜೇತರಾದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ಹೆಚ್. ಅನ್ನಪೂರ್ಣೇಶ್ವರಿ ಪ್ರಥಮ ಸ್ಥಾನ, ಪ್ರದೀಪ ನಾಯಕ್ ಎಂ ದ್ವಿತೀಯ ಸ್ಥಾನ ಹಾಗೂ ಭವಾನಿ ಎಸ್ ತೃತೀಯ ಸ್ಥಾನ ಪಡೆದರು. ಎಂ.ಪೂಜಾ, ಟಿ.ನಯನ ಹಾಗೂ ಟಿ.ಗಗನ ಸಮಾದಾನಕರ ಬಹುಮಾನ ಪಡೆದರು.
ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪದನಿಮಿತ್ತ ಉಪನಿರ್ದೇಶಜಕರಾದ ಟಿ.ಸಿ.ಲೀಲಾವತಿ, ಸಿ.ಆರ್.ಪರಮೇಶ್ವರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ಉಪನ್ಯಾಸಕರಾದ ಹನುಮಂತರಾಯಪ್ಪ ಸ್ವಾಗತಿಸಿ ನಿರೂಪಿಸಿದರು.