ಬೊಮ್ಮಾಯಿ ಸರ್ಕಾರದ ‘ಅಕ್ರಮ’ಗಳ ಸ್ಫೋಟ; ಟೆಂಡರ್ ಗೋಲ್‌ಮಾಲ್ ಬಗ್ಗೆ ಕಾಂಗ್ರೆಸ್ ನಾಯಕರ ತುರ್ತು ಸುದ್ದಿಗೋಷ್ಠಿ…

ಗೋಲ್‌ಮಾಲ್ ಬಗ್ಗೆ ಕಾಂಗ್ರೆಸ್ ನಾಯಕರ
ಬೆಂಗಳೂರು: ಪರ್ಸಂಟೇಜ್ ಕರ್ಮಕಾಂಡ, ಓಟರ್ ಲಿಸ್ಟ್ ಅಕ್ರಮ ಸಹಿತ ಹಲವು ಹಗರಣಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ಮತ್ತಷ್ಟು ಅಕ್ರಮಗಳ ಆರೋಪ ಮಾಡಿದೆ. ಇದೀಗ ಮತ್ತಷ್ಟು ಟೆಂಡರ್ ಅಕ್ರಮಗಳನ್ನು ಕಾಂಗ್ರೆಸ್ ನಾಯಕರು ಬಯಲು ಮಾಡಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿಂದು ಕರೆದ ತುರ್ತು ಸುದ್ದಿಗೋಷ್ಠಿ ರಾಜ್ಯ ರಾಜಕಾರಣದಲ್ಲಿ ವಿದ್ಯಮಾನಗಳ ಕೇಂದ್ರಬಿಂದುವಾಯಿತು. ಎಐಸಿಸಿ ನಾಯಕ ರಣದೀಪ್ ಸುರ್ಜೀವಾಲ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕಮಾರ್ ಸಹಿತ ಕಾಂಗ್ರೆಸ್ ಹಿರಿಯ ನಾಯಕರು ತುರ್ತು ಸುದ್ದಿಗೋಷ್ಠಿ ನಡೆಸಿ ಬೊಮ್ಮಾಯಿ ಸರ್ಕಾರದ ಅಕ್ರಮಗಳನ್ನು ಬಹಿರಂಗಪಡಿಸಿದರು.

ರಾಜ್ಯ ಸರ್ಕಾರ ಗೋಲ್ಮಾಲ್ನಲ್ಲಿ ತೊಡಗಿದೆ ಎಂದು ದೂರಿದ ಈ ನಾಯಕರು, ರಾಜ್ಯ ಸರ್ಕಾರವು ಎಲ್ಲಾ ಇಲಾಖೆಯಲ್ಲೂ ತರಾತುರಿಯಲ್ಲೇ ಟೆಂಡರ್ ಕರೆಯುತ್ತಿದೆ. ಹಿಂದೆ 500 ಕೋಟಿಯ ಟೆಂಡರ್ಗಳನ್ಬು ಇದೀಗ 1,000 ಕೋಟಿಗೆ ಅಕ್ರಮವಾಗಿ ಹೆಚ್ಚಿಸಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರವು ಬೊಕ್ಕಸವನ್ನು ಖಾಲಿ ಮಾಡುತ್ತಿದೆ ಎಂದು ದೂರಿದ ಈ ನಾಯಕರು, ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮಾಡಿರುವ ಆರೋಪಗಳನ್ನು ಪ್ರಸ್ತಾಪಿಸಿ ಬೊಮ್ಮಾಯಿ ಸರ್ಕಾರದ ವಿರುದ್ದ ಬ್ರಷ್ಟಾಚಾರ ಆರೋಪದ ಆಸ್ತ್ರ ಪ್ರಯೋಗಿಸಿದರು.
ಸರ್ಕಾರವು ಅಕ್ರಮವಾಗಿ ಟೆಂಡರ್ ಕರೆದಿದ್ದೇ ಅಲ್ಲದೇ, ಬಿಜೆಪಿ ನಾಯಕರು ತಮಗೆ ಬೇಕಾದವರಿಗೆ ಟೆಂಡರ್ ಹಂಚಿಕೆ ಮಾಡಿಸಿಕೊಳ್ಳುತ್ತಿದ್ದಾರೆ, ಅಸಮಾಧಾನ ಹೊಂದಿರುವ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಲಾಗುತ್ತಿದೆ. ಕಾಮಗಾರಿಗಳ ಬಿಲ್ಗಳನ್ನು ಬಾಕಿ ಇಟ್ಟು ಕಮೀಷನ್ ದಂಧೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಕಚೇರಿಯಲ್ಲೇ ಈ ಕಮೀಷನ್ ಒತ್ತಡ ತಂತ್ರ ನಡೆಯುತ್ತಿದೆ ಎಂದು ಆರೋಪಿಸಿದ ಈ ನಾಯಕರು, ಜನರ ಹಣವನ್ನು ಬಿಜೆಪಿ ಸರ್ಕಾರ ದುರುಪಯೋಗ ಪಡಿಸುತ್ತಿದೆ ಎಂದು ದೂರಿದರು.

 
                         
                       
                       
                       
                       
                      