ಅಂಗನವಾಡಿ ಸಹಾಯಕಿ ಹುದ್ದೆ ಮೀಸಲಾತಿಯಲ್ಲಿ ಅನ್ಯಾಯ: ಎಡಿಸಿ ಗೆ ಮನವಿ ಸಲ್ಲಿಸಿದ ಬಿ ಎಸ್ ಪಿ
ದಾವಣಗೆರೆ: ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಿದ್ದ ಅಂಗನವಾಡಿ ಸಹಾಯಕಿ ಹುದ್ದೆಯನ್ನು ಸಾಮಾನ್ಯ ವರ್ಗದವರಿಗೆ ನೀಡಿ ಪರಿಶಿಷ್ಟರಿಗೆ ಅನ್ಯಾಯ ಎಸಗಲಾಗಿದ್ದು, ನ್ಯಾಯ ಒದಗಿಸಿಕೊಡುವಂತೆ ಬಹುಜನ ಸಮಾಜ ಪಾರ್ಟಿ ವತಿಯಿಂದ ಅಪರ ಜಿಲ್ಲಾಧಿಕಾರಿ ಪೂಜಾರ ವೀರ ಮಲ್ಲಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಪಾರ್ಟಿಯ ಜಿಲ್ಲಾಧ್ಯಕ್ಷ ಹನುಮಂತಪ್ಪ, ಹನಗವಾಡಿ ಗ್ರಾಮದಲ್ಲಿರುವ ನಾಲ್ಕು ಅಂಗನವಾಡಿ ಕೇಂದ್ರಗಳ ಪೈಕಿ ಒಂದರಲ್ಲಿ ಪ.ಜಾತಿಯ ಕಾರ್ಯಕರ್ತೆ ಮತ್ತು ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಸಹಾಯಕಿ ಮರಣದ ನಂತರ ಈ ಜಾಗದಲ್ಲಿ ಪರಿಶಿಷ್ಟರ ಬದಲು ಸಾಮಾನ್ಯ ವರ್ಗದ ಪದವಿದರೆ ಅಭ್ಯರ್ಥಿಯನ್ನು ಸಹಾಯಕಿಯಾಗಿ ನೇಮಿಸಿಕೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹರಿಹರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸೂಪರವೈಸರ್, ಕಾರ್ಯಕರ್ತೆ ಇವರುಗಳು ಉದ್ದೇಶಪೂರ್ವಕವಾಗಿ ಈ ನಾಲ್ಕು ಅಂಗನವಾಡಿ ಕೇಂದ್ರಗಳಲ್ಲಿ ಪರಿಶಿಷ್ಟ ಮಕ್ಕಳನ್ನು ವಿಭಾಗಿಸಿ ಪರಿಶಿಷ್ಟ ಅಂಗನವಾಡಿ ಕೇಂದ್ರದಲ್ಲಿ ಪ.ಜಾ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂದು ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಪರಿಶಿಷ್ಟರ ಹಕ್ಕನ್ನು ಕಸಿದುಕೊಂಡು ಅನ್ಯಾಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಅವರು ಆಪಾದಿಸಿರುವ ಅವರು, ಕೂಡಲೇ ಪರಿಶಿಷ್ಟ ಜಾತಿಯವರಿಗೆ ನ್ಯಾಯ ಒದಗಿಸಿಕೊಡುವಂತೆ ಕೋರಿದರು.