ಅನುದಾನ ಕೊಡದೆ ನಿರ್ಲಕ್ಷ್ಯ; ಜಿ.ಪಂ. ಸದಸ್ಯೆ ಸುವರ್ಣ ನಾಗರಾಜ್ ಆರೋಪ

ಹರಪನಹಳ್ಳಿ: ‘ಬಳ್ಳಾರಿ ಜಿಲ್ಲಾ ಪಂಚಾಯಿತಿಯಲ್ಲಿ ಹರಪನಹಳ್ಳಿಗೆ ಅನುದಾನ ಕೊಡದೆ ನಿರ್ಲಕ್ಷ್ಯ ಮಾಡಲಾಗಿದೆ. ಇದರಿಂದಾಗಿ ತಾಲ್ಲೂಕಿನ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಆರುಂಡಿ ಸುವರ್ಣ ನಾಗರಾಜ್ ದೂರಿದರು.
ಪಟ್ಟಣದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ತಾಲ್ಲೂಕನ್ನು ದಾವಣಗೆರೆಯಿಂದ ಬಳ್ಳಾರಿಗೆ ಸೇರಿಸಿದ ನಂತರ ನಮ್ಮ ನಿರೀಕ್ಷೆ ಹುಸಿಯಾಗಿದೆ. ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಸದಸ್ಯರಿಗೆ ಕಿಂಚಿತ್ತೂ ಗೌರವ ಕೊಡುತ್ತಿಲ್ಲ. ನಮ್ಮ ಅನಿಸಿಕೆಗಳನ್ನು ಯಾರೂ ಪರಿಗಣಿಸುತ್ತಿಲ್ಲ’ ಎಂದು ಅವರು ದೂರಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಆರ್. ಜಯಶೀಲ, ಡಾ.ಮಂಜುನಾಥ ಉತ್ತಂಗಿ, ಡಿ. ಸಿದ್ದಪ್ಪ ಮಾತನಾಡಿದರು. ಒಬ್ಬ ಮಹಿಳೆ ಸೇರಿ ನಾಲ್ಕು ಜನ ಅಂಗವಿಕಲರಿಗೆ ತ್ರಿಚಕ್ರ ವಾಹನ ಕೊಡಲಾಯಿತು.
ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ವಿಭಾಗೀಯ ಕಾರ್ಯಪಾಲಕ ಎಂಜಿನಿಯರ್ ಐ. ಸುರೇಶ್, ಸಹಾಯಕ ಕಾರ್ಯಪಾಲಕ ಸತೀಶಗೌಡ ಪಾಟೀಲ್, ಎಂಜಿನಿಯರ್ ಗಳಾದ ಕಿರಣ್, ಗಜೇಂದ್ರ, ಎಂಆರ್‌ಡಬ್ಲ್ಯೂ ಧನರಾಜ್ ಅವರೂ ಈ ಸಂದರ್ಭದಲ್ಲಿ ಇದ್ದರು.