ಶಿಶುಪಾಲನಾ ಕೇಂದ್ರ ತೆರೆಯಲು ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ದಾವಣಗೆರೆ : ಸರ್ಕಾರಿ ಕಛೇರಿಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯುವ ಮೂಲಕ ಉದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಅದರಂತೆ ಪ್ರಾರಂಭದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿ ಹಾಗೂ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದು, ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅರ್ಹ ಸ್ಥಳಿಯ (ದಾವಣಗೆರೆ ತಾಲ್ಲೂಕು ವ್ಯಾಪ್ತಿಯ) ಸ್ವಯಂ ಸೇವಾ ಸಂಸ್ಥೆಗಳಿಂದ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದ್ದು, ಅರ್ಹ ಆಸಕ್ತ ಸ್ವಯಂ ಸೇವಾ ಸಂಸ್ಥೆಯವರು ಏ.21 ರ ಸಂಜೆ 5 ಗಂಟೆಯೊಳಗಾಗಿ ಪೂರಕ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು ದ್ವಿಪ್ರತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಖುದ್ದು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಬಯಸುವ ಸ್ವಯಂ ಸೇವಾ ಸಂಸ್ಥೆಯು ನಿಯಮಾನುಸಾರ ನೋಂದಣಿಯಾಗಿರಬೇಕು. ನೋಂದಣಿ ಪ್ರಮಾಣ ಪತ್ರದ ಪ್ರತಿ ಲಗತ್ತಿಸಬೇಕು, ನೊಂದಣಿಯಾಗಿ ಕನಿಷ್ಠ 3 ವರ್ಷವಾಗಿರಬೇಕು. ಸ್ವಯಂ ಸೇವಾ ಸಂಸ್ಥೆಯು ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಇರಬೇಕು. ಶಿಶುಪಾಲನಾ ಕೇಂದ್ರಗಳನ್ನು ನಡೆಸಿರುವ ಅಥವಾ ನಿರ್ವಹಣೆ ಮಾಡಿರುವ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಈ ಬಗ್ಗೆ ಪೂರಕ ದಾಖಲಾತಿ ಲಗತ್ತಿಸಬೇಕು.
ಸ್ವಯಂ ಸೇವಾ ಸಂಸ್ಥೆಯವರು ತಮ್ಮ ಸ್ವಂತ ಬಂಡವಾಳದಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ನಡೆಸಿ ತದನಂತರ ಸರ್ಕಾರದಿಂದ ಅನುದಾನ ಪಡೆಯಲು ಸಿದ್ಧರಿರಬೇಕು. ಸರ್ಕಾರಿ ಕಛೇರಿಗಳ ಸಮಯದ ಅವಧಿಯಲ್ಲಿ ಪೂರ್ಣವಾಗಿ ಶಿಶುಪಾಲನಾ ಕೇಂದ್ರಗಳನ್ನು ತೆರೆದು ಸೇವೆ ಒದಗಿಸಲು ಬದ್ಧರಾಗಿರಬೇಕು. ಸ್ವಯಂ ಸೇವಾ ಸಂಸ್ಥೆಯು ಸರ್ಕಾರದ ಯಾವುದೇ ಇಲಾಖೆಯಡಿ ಕಪ್ಪು ಪಟ್ಟಿಗೆ ಸೇರಿರಬಾರದು. ಸರ್ಕಾರದ ಮಾರ್ಗಸೂಚಿ ಪ್ರಕಾರ ಶಿಶು ಪಾಲನಾ ಕೇಂದ್ರಕ್ಕೆ ಅರ್ಹ ಶಿಕ್ಷಕಿ ಮತ್ತು ಸಹಾಯಕಿಯನ್ನು ನೇಮಕ ಮಾಡಿಕೊಳ್ಳಲು ಬದ್ಧರಾಗಿರಬೇಕು ಹಾಗೂ ಇಲಾಖೆಯ ಮಾರ್ಗಸೂಚಿ ಪ್ರಕಾರ ಶಿಶುಪಾಲನಾ ಕೇಂದ್ರ ನಡೆಸಲು ಬದ್ಧರಾಗಿರಬೇಕು. ಶಿಶುಪಾಲನಾ ಕೇಂದ್ರ ಚಟುವಟಿಕೆಗಳನ್ನು ತೃಪ್ತಿಕರವಾಗಿ ನಡೆಸದೆ ಇರುವುದು ಕಂಡುಬಂದಲ್ಲಿ ಆದೇಶವನ್ನು ರದ್ದುಪಡಿಸಲಾಗುವುದು. ನಿಗದಿತ ದಿನಾಂಕ ಮತ್ತು ಸಮಯದ ನಂತರ ಸ್ವೀಕೃತವಾದ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುವೆಂಪು ನಗರ, 14ನೇ ಮುಖ್ಯರಸ್ತೆ, ಎಂ.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿಗೆ ಖುದ್ದಾಗಿ ಕಛೇರಿ ಸಮಯದೊಳಗಾಗಿ ಅಥವಾ ದೂರವಾಣಿ ಸಂಖ್ಯೆ 08192- 264056 ಅನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
                         
                       
                       
                       
                       
                       
                       
                      