ಆಟದ ಮೈದಾನಗಳು ಇಲ್ಲದ ಶಾಲೆಗಳು ಪರವಾನಿಗೆ ರದ್ಧು ಮಾಡಲಾಗುವುದು – ಕ್ರೀಡಾ ಸಚಿವ ಕೆ.ಸಿ ನಾರಾಯಣ ಗೌಡ
ದಾವಣಗೆರೆ: ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಾಣಕ್ಕೆ 15 ಕೋಟಿ ಹಣ ಮಂಜೂರಾಗಿದ್ದು, ಶೀಘ್ರದಲ್ಲಿಯೇ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಸ್ಟೆಲ್ ನಿರ್ಮಿಸಲಾಗುತ್ತದೆ ಎಂದು ಕ್ರೀಡಾ ಹಾಗೂ ರೇಷ್ಮೆ ಸಚಿವ ಕೆ.ಸಿ ನಾರಾಯಣ ಗೌಡ ಹೇಳಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೀಡೆಗಳನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯಬೇಕು ಎನ್ನುವ ಉದ್ದೇಶದಿಂದಲೇ ಕ್ರೀಡಾ ಖಾತೆಯನ್ನು ತೆಗೆದುಕೊಂಡಿದ್ದೇನೆ ಎಂದರು.
ರಾಜ್ಯದಲ್ಲಿ ಪ್ರತಿಭೆ, ಕಲೆ ಇರುವ ಮಕ್ಕಳು ಸಾಕಷ್ಟು ಇದ್ದಾರೆ ಅವರಿಗೆ ಪ್ರೊತ್ಸಾಹ ನೀಡುವ ಕೆಲಸ ನಾವು ಮಾಡಬೇಕಿದೆ. ನನ್ನ ಅವಧಿಯಲ್ಲಿ ಆದಷ್ಟು ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲು ಪ್ರೋತ್ಸಾಹ ನೀಡಲಾಗುತ್ತದೆ ಎಂದು ತಿಳಿಸಿದರು.
ಆಟದ ಮೈದಾನಗಳು ಇಲ್ಲದ ಶಾಲೆಗಳು ಪರವಾನಿಗೆ ರದ್ಧು ಮಾಡಲಾಗುವುದು. ಶಾಲೆಗಳಲ್ಲಿ ಆಟದ ಮೈದಾನ ಇರುವುದು ಕಡ್ಡಾಯ. ಇಲ್ಲವಾದಲ್ಲಿ ಬಾಡಿಗೆ ಪಡೆದಾದರೂ ಮಕ್ಕಳಿಗೆ ಶಾಲಾ ಅವಧಿಯಲ್ಲಿ ಕಡ್ಡಾಯವಾಗಿ ಒಂದು ಗಂಟೆಯ ಕಾಲ ಆಟವಾಡಲು ಬಿಡಬೇಕು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಮುಂದಿನ ವರ್ಷ ಕೇಲೋ ಇಂಡಿಯಾ ಶುರುವಾಗಲಿದ್ದು, ಅದಕ್ಕಾಗಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುತ್ತೇವೆ. 75 ವರ್ಷದ ಸುವರ್ಣ ವರ್ಷಕ್ಕೆ 75 ಮಕ್ಕಳಿಗೆ 2024 ರ ಒಲಂಪಿಕ್ ಗೆ ತರಬೇತಿ ನೀಡಿ ತಯಾರಿ ಮಾಡುತ್ತಿದ್ದೇವೆ ಎಂದರು.
ಯುವಸಬಲೀಕರಣ ಇಲಾಖೆಯಿಂದ ಗ್ರಾಮೀಣ ಭಾಗದ 2 ರಿಂದ 3 ಸಾವಿರ ಕ್ರೀಡಾಪಟುಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕರ್ನಾಟಕದ ಕ್ರೀಡಾಪಟುಗಳಿಗೆ ಸೂಕ್ತ ರೀತಿ ತರಬೇತಿ ನೀಡಿ ಅವರನ್ನು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಿಗೆ ಅಣಿಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಈ ಮೊದಲು ಸ್ಪೋರ್ಟ್ಸ್ ನಿಂದ ಹೋದವರಿಗೆ ಪೊಲೀಸ್ ಇಲಾಖೆಯಲ್ಲಿ ಶೇ.2 ರಷ್ಟು ಉದ್ಯೋಗಾವಕಾಶವಿತ್ತು. ಈಗ ಎಲ್ಲಾ ಇಲಾಖೆಯಲ್ಲಿ ಕೂಡ ಶೇ. 2 ರಷ್ಟು ಮೀಸಲಾತಿ ಇಡಲಾಗಿದೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲಾ ಜಿಲ್ಲೆಗಳಲ್ಲೂ ಕ್ರೀಡೆಗೆ ಉತ್ತೇಜನ ಕೊಡುವಲ್ಲಿ ಅಗತ್ಯ ಸೌಲಭ್ಯಗಳ ಅನುಷ್ಟಾನಕ್ಕಾಗಿಯೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ದಾವಣಗೆರೆ ಜಿಲ್ಲೆಗೂ ಸಿಂಥೆಟಿಕ್ ಟ್ರ್ಯಾಕ್ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.
ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟದಲ್ಲಿ ನಾಲ್ಕು ಖಾತೆಗಳಿದ್ದು, ಮುಖ್ಯ ಮಂತ್ರಿಗಳು ಮತ್ತು ಹೈಕಮಾಂಡ್ ಸೂಚನೆಯಂತೆ ಅದನ್ನು ನೀಡಲಾಗುತ್ತದೆ. ಎಲ್ಲರಿಗೂ ಒಳ್ಳೆಯ ಸ್ಥಾನ ಸಿಗುತ್ತದೆ. ಅದರಲ್ಲಿ ಯಾವುದೇ ಅನುಮಾನವೂ ಬೇಡ ಎಂದರು.
ಶಾಸಕ ಹೆಚ್. ವಿಶ್ವನಾಥ್ ಅವರು ಹಿರಿಯರು ಅವರ ಬಗ್ಗೆ ಮಾತನಾಡುವುದಿಲ್ಲ. ಇಬ್ಬರು ಒಂದೇ ಪಕ್ಷದಲ್ಲಿ ಇದ್ದವರು ಜೊತೆಗೆ ಬಂದವರು. ಹಿರಿಯರಿಗೆ ಬುದ್ದಿ ಹೇಳೋಕೆ ಆಗುತ್ತದಾ? ಅವರು ದೊಡ್ಡವರು ಎಂದರು.
ಹಳೇ ಮೈಸೂರು ಭಾಗದಲ್ಲಿ ಪಕ್ಷ ಕಟ್ಟಬೇಕಿದೆ. ಹಾಗಾಗಿ, ಮೈಸೂರು ಭಾಗಕ್ಕೆ ವಿಜಯೇಂದ್ರ ಬಂದರೆ ಪಕ್ಷ ಸಂಘಟನೆಗೆ ಸಹಕಾರಿಯಾಗುತ್ತದೆ ಎಂದರು.