ಅನ್ಯ ಕೋಮಿನ ಯುವತಿ ಮಾತಾಡಿಸಿದ್ದ ಯುವಕನ ಮೇಲೆ ಹಲ್ಲೆ.! ಚೇತನ್ ಆರೋಪ

ದಾವಣಗೆರೆ: ಅನ್ಯ ಕೋಮಿನ ಯುವತಿಯನ್ನು ಮಾತನಾಡಿಸಿದ್ದಕ್ಕೆ ಏಕಾಏಕಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಘಟನೆ ಇಲ್ಲಿನ ಕೆಟಿಜೆ ನಗರದಲ್ಲಿ ನಡೆದಿದೆ.
ಜಗಳೂರು ತಾಲ್ಲೂಕಿನ ಮುತ್ತೂರು ಗ್ರಾಮದವರಾದ ಟಿ.ಓಬಳೇಶ್  (26 ವರ್ಷ) ಹಲ್ಲೆಗೊಳಗಾದ ಯುವಕ. ರೈಲ್ವೆ ಮೇಲ್ ಸರ್ವಿಸ್ನಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿರುವ ಟಿ.ಓಬಳೇಶ್ ಸರಸ್ವತಿ ನಗರದಲ್ಲಿ ವಾಸವಿದ್ದು, ನಿಟುವಳ್ಳಿ ಹೊಸಬಡಾವಣೆಯಲ್ಲಿ ಅವರ ಚಿಕ್ಕಮ್ಮನ ಮನೆಗೆ ಆಗಾಗ ಹೋಗುತ್ತಿದ್ದಾಗ ಅಲ್ಲಿ ಅನ್ಯ ಕೋಮಿನ ಯುವತಿ ಪರಿಚಯ ಆಗಿದ್ದಳು.
ಬುಧವಾರ ಎಂದಿನಂತೆ ಕಚೇರಿಗೆ ಹೋಗಲು ನಗರದ ರೈಲ್ವೇ ನಿಲ್ದಾಣದ ಬಳಿ ಸಿಗ್ನಲ್ ನಲ್ಲಿ ನಿಂತಾಗ ಆ ಯುವತಿ ಕಾಣಿಸಿದ್ದರಿಂದ ಆಕೆಯನ್ನು ಓಬಳೇಶ್ ಮಾತನಾಡಿಸಿದ್ದಾನೆ. ಆಗ ಅಲ್ಲೇ ಇದ್ದ ಅದೇ ಕೋಮಿನವರು ಯುವತಿಯೊಂದಿಗೆ ಆತನನ್ನು ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡು ಕೆಟಿಜೆ ನಗರದ ಗೋಡೌನ್ ಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಚೇತನ್ ತಿಳಿಸಿದ್ದಾರೆ.

 
                         
                       
                       
                       
                       
                       
                       
                      