ಆಟೋಗಳಲ್ಲಿ ಸೆಪ್ಟೆಂಬರ್ 1 ರಿಂದ ಮೀಟರ್ ಅಳವಡಿಕೆ ಕಡ್ಡಾಯ: ಜಿಲ್ಲಾಡಳಿತದ ಆದೇಶದಲ್ಲಿ ಏನಿದೆ ಗೊತ್ತಾ.?

ದಾವಣಗೆರೆ: ಆಟೋಗಳಲ್ಲಿ ಬರುವ ಸೆ.1 ರಿಂದ ಅನ್ವಯವಾಗುವಂತೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ, ಪರಿಷ್ಕೃತ ದರ ನಿಗಧಿಪಡಿಸಿ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಕಾರ್ಯದರ್ಶಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಆಟೋಗಳ ಚಾಲಕರು ಮತ್ತು ಮಾಲೀಕರು ಆಟೋಗಳಲ್ಲಿ ಕಾನೂನಿನ ಪ್ರಕಾರ ಫ್ಲಾಗ್ ಮೀಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಕನಿಷ್ಟ ಮೊದಲ 2 ಕಿ.ಮೀ ಗೆ 30 ರೂ., ನಂತರದ ಪ್ರತಿ ಒಂದು ಕಿಮೀ ಗೆ 15 ರೂ., ಪ್ರತಿ 15 ನಿಮಿಷದ ಕಾಯುವಿಕೆ ಉಚಿತ, ನಂತರದ ಸಮಯಕ್ಕೆ 5ರೂ., 20 ಕೆಜಿ ಲಗೇಜು ಮೇಲ್ಪಟ್ಟು 5 ರೂ., ರಾತ್ರಿ ಸಮಯದಲ್ಲಿ 10 ರಿಂದ ಮುಂಜಾನೆ 5 ಗಂಟೆವರೆಗೆ ನಿಗದಿತ ದರಕ್ಕಿಂತ ಒಂದೂವರೆ ಪಟ್ಟು ನಿಗದಿಗೊಳಿಸಿ ಆದೇಶಿಸಿದ್ದಾರೆ.
ಪರಿಷ್ಕೃತ ದರಗಳು ಮೀಟರಿನಲ್ಲಿ ಪ್ರದರ್ಶನವಾಗಬೇಕು ಮತ್ತು ಪ್ರತಿಯೊಂದು ಆಟೋಗಳಲ್ಲಿಯೂ ಪ್ರದರ್ಶಿಸಬೇಕು, ಪ್ರಯಾಣಿಕರ ಪ್ರಯಾಣಕ್ಕೆ ತಕ್ಕಂತೆ ನಿಗದಿತ ದರ ಪಡೆದುಕೊಳ್ಳಬೇಕು. ನಿಗದಿತ ದರಕ್ಕಿಂತ ಹೆಚ್ಚಿಗೆ ಪಡೆದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ದಂಡವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆಟೋರಿಕ್ಷಾದವರು ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಸೋಮವಾರ ದರ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದ್ದು, ಒಂದು ವೇಳೆ ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುವುದು ಕಂಡುಬಂದರೆ ದಂಡ ವಿಧಿಸಲಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಕಾರ್ಯದರ್ಶಿ ಶ್ರೀಧರ್ ಕೆ. ಮಲ್ನಾಡ್, ಎಸ್ಪಿ ಸಿ.ಬಿ. ರಿಷ್ಯಂತ್ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಸಿದ್ದಾರೆ.