ಆಯುಷ್ ಇಲಾಖೆ ಕಛೇರಿ ನಿರ್ಮಾಣಕ್ಕೆ ಚಾಲನೆ ಶೀಘ್ರ ಆಯುಷ್ ಆಸ್ಪತ್ರೆ ಲೋಕಾರ್ಪಣೆ: ಎಸ್ಸೆಸ್

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ಆಯುಷ್ ಆಸ್ಪತ್ರೆಯನ್ನು ಶೀಘ್ರದಲ್ಲೇ ನಾಗರೀಕರ ಸೇವೆಗೆ ಸಮರ್ಪಿಸಲಾಗುವುದು ಎಂದು ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.
ಆಯುಷ್ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಮೂಲಕ 150 ಲಕ್ಷ ವೆಚ್ಚದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಆಯುಷ್ ಇಲಾಖೆಯ ಜಿಲ್ಲಾ ಕಛೇರಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ಇದೇ ಸ್ಥಳದಲ್ಲಿ ಆಯುಷ್ ಆಸ್ಪತ್ರೆ ನಿರ್ಮಿಸಬೇಕೆಂಬ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭೂಮಿಪೂಜೆ ನೇರವೇರಿಸಲಾಯಿತು. ಕಾಮಗಾರಿ ಹಣಕಾಸಿನ ವಿಳಂಬದಿಂದ ಸ್ವಲ್ಪದಿನಗಳ ಕಾಲ ತಡವಾಯಿತು. ಆಗ ಮತ್ತೆ ಹಿಂದಿನ ಆರೋಗ್ಯ ಸಚಿವರ ಜೊತೆ ಮಾತನಾಡಿ ಅನುದಾನ ನೀಡಲಾಗಿದೆ. ಇದೀಗ ಅಂತಿಮವಾಗಿದ್ದು, ಶೀಘ್ರದಲ್ಲೇ ಆಸ್ಪತ್ರೆಯ ಸೇವೆ ಸಾರ್ವಜನಿಕರಿಗೆ ಲಭಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಸ್ಥಳೀಯ ನಾಗರೀಕರ ಮನವಿಗೆ ಸ್ಪಂದಿಸಿದ ಶಾಸಕರು ನಾಗನೂರು ಗ್ರಾಮದಲ್ಲಿ ಅಪೂರ್ಣಗೊಂಡಿರುವ ಒಳಚರಂಡಿ ವ್ಯವಸ್ಥೆ ಹಾಗೂ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ಸೂರು ಇಲ್ಲದವರಿಗೆ ಸೂರು ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಲಲಿತಮ್ಮ, ಸದಸ್ಯ ಎನ್.ಎಂ.ಮಲ್ಲಿಕಾರ್ಜುನ್, ಮಾಜಿ ಸದಸ್ಯರಾದ ಶಿರಮನಹಳ್ಳಿ ರುದ್ರೇಶ್, ನಾಗಮ್ಮ ಕೇಶವಮೂರ್ತಿ ಬಡಾವಣೆಯ ಮಲ್ಲಿಕಾರ್ಜುನ್, ಜಿಲ್ಲಾ ಆಯುಷ್ ಇಲಾಖೆಯ ಡಾ|| ಶಂಕರಗೌಡ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕರ‍್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಮುಖಂಡರಾದ ಶಶಿಕುಮಾರ್ , ಗ್ರಾಮ ಪಂಚಾಯತ್ ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.