B Khatha: ಬಿ-ಖಾತಾಗೆ ಶುಲ್ಕ ನಿಗಧಿಗೆ ಸಚಿವರು ಗರಂ: ಎಸ್ ಎಸ್ ಮಲ್ಲಿಕಾರ್ಜುನ ಸೂಚನೆಯಂತೆ ಬಿ-ಖಾತ ಶುಲ್ಕ ರದ್ದು

ದಾವಣಗೆರೆ: (B Khatha) ಅನಧಿಕೃತ ಬಡಾವಣೆಯ ಸೈಟ್, ಮನೆ, ಕಟ್ಟಡಗಳಿಗೆ ಡೋರ್ ನಂಬರ್ ನೀಡಲು ನಿಗಧಿ ಮಾಡಿದ್ದ 10 ಸಾವಿರ ಶುಲ್ಕವನ್ನು ಗಣಿ ಮತ್ತು ಭೂ ವಿಜ್ಞಾನ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಶುಲ್ಕ ನಿಗಧಿಯನ್ನು ರದ್ದು ಪಡಿಸಿದ್ದಾರೆ.
ಇ- ಆಸ್ತಿಯಡಿ ಬಿ-ಖಾತೆ ನೀಡಲು ಅಭಿವೃದ್ಧಿ ಮತ್ತು ಸುಧಾರಣೆಯ ಹೆಸರಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಪಡೆಯುತ್ತಿದ್ದ 10 ಸಾವಿರ ಶುಲ್ಕವನ್ನು ಪಡೆಯುತ್ತಿದೆ. ರಾಜ್ಯದ ಇತರೆ ಯಾವುದೇ ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿ ಮತ್ತು ಸುಧಾರಣೆ ಶುಲ್ಕ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರಲಿಲ್ಲ. ಆದರೆ, ದಾವಣಗೆರೆಯಲ್ಲಿ ಮಾತ್ರ ಹೊಸದಾಗಿ ಡೋರ್ ನಂಬರ್ ನೀಡಲು ಶುಲ್ಕ ಪಡೆಯಲಾಗುತ್ತಿದೆ ಎಂದು ಬಡ ನಿವೇಶನದಾರರು ಸಚಿವರ ಗಮನಕ್ಕೆ ತಂದಿದ್ದರು.
ತಕ್ಷಣ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಆಯುಕ್ತರಿಗೆ ಬಡವರ ಅನೂಕೂಲಕ್ಕಾಗಿ ಕಾಂಗ್ರೆಸ್ ಸರ್ಕಾರವು ನೂತನವಾಗಿ ಜಾರಿ ಮಾಡಿರುವ ಈ- ಖಾತಾ ಅಭಿಯಾನಕ್ಕೆ ಶುಲ್ಕ ನಿಗಧಿ ಮಾಡಿರುವುದು ಸರಿಯಾದ ಕ್ರಮವಲ್ಲ. ಮೊದಲು ಶುಲ್ಕ ನಿಗಧಿ ಆದೇಶ ರದ್ದು ಪಡಿಸುವಂತೆ, ಬಡ ವರ್ಗದ ನಿವೇಶನದಾರರಿಗೆ ಅನುಕೂಲದ ಕ್ರಮಗಳನ್ನು ಜಾರಿ ಮಾಡುವಂತೆ ಸೂಚಿಸಿದರು. ಸಚಿವರ ಸೂಚನೆಯಂತೆ ಆಯುಕ್ತರು 10 ಸಾವಿರ ಹೆಚ್ಚುವರಿ ಶುಲ್ಕವನ್ನು ಆದೇಶವನ್ನು ರದ್ದು ಪಡಿಸಿ ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಂದ ಇ-ಖಾತ ಅಭಿಯಾನದಲ್ಲಿ ಆಗಿರುವ ಲೋಪಕ್ಕೆ ತಕ್ಷಣ ಸ್ಪಂದಿಸಿರುವುದು ಬಡವರ್ಗದ ಜನತೆಯಿಂದ ಮೆಚ್ಚುಗೆ ವ್ಯಕ್ತವಾಗುವಂತೆ ಹಾಗೂ ಸಂತಸ ಮೂಡುವಂತೆ ಮಾಡಿದೆ.