ಭದ್ರಾ ಜಲಾಶಯ ಪ್ರದೇಶದಲ್ಲಿ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಭೇಟಿ

badhra jalashaya cada

ದಾವಣಗೆರೆ: ಕಳೆದ ಒಂದು ವಾರದಿಂದ ಭದ್ರಾ ಜಲಾಶಯದ ಜಲಾನಯಾನ ಪ್ರದೇಶದಲ್ಲಿ ಅತಿ ಹೆಚ್ಚಿನ ವರ್ಷಧಾರೆ ಆಗಿರುವ ಹಿನ್ನೆಲೆಯಲ್ಲಿ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರ ಮತ್ತು ಜನ ಸಾಮಾನ್ಯರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಕಾಡಾ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದರು.

ಭದ್ರಾ ಜಲಾಶಯಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ಕಳೆದ 15 ದಿನಗಳ ಹಿಂದೆ ಎಡ ಮತ್ತು ಬಲ ನಾಲೆಗಳಿಗೆ ನೀರು ಹರಿಸುವ ಸಂಬಂಧ ನಡೆಸಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವ್ಯಕ್ತಪಡಿಸಿದ್ದ ನೀರು ಕೊರತೆಯ ಆತಂಕ ದೂರವಾಗಿದ್ದು, ಈ ಬಾರಿ ಒಂದು ತಿಂಗಳ ಮುಂಚೆಯೇ ಜಲಾಶಯ ತುಂಬಿದೆ. ಪ್ರತಿ ಬಾರಿ ಜಲಾಶಯ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುವುದು ವಾಡಿಕೆ. ಆದರೆ ಈ ವರ್ಷ ಒಂದು ತಿಂಗಳ ಮುಂಚೆ ಜಲಾಶಯ ತುಂಬಿರುವುದು ವಿಶೇಷ ದಾಖಲೆಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ಈ ಬಾರಿಯು ಬೇಸಿಗೆ ಬೆಳೆಗೆ ನೀರು ಲಭ್ಯವಾಗುವುದರಲ್ಲಿ ಅನುಮಾನವಿಲ್ಲ. ಕಳೆದ ಬಾರಿ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ಹರಿಸಿದಂತೆ ಮುಂಗಾರು ಬೆಳೆಗಳಿಗೆ ಕೂಡ ನೀರು ಹರಿಸುತ್ತೇವೆ. ನಾನು ಅಧಿಕಾರದಲ್ಲಿ ಇರುವವರೆಗೆ ರೈತರಿಗೆ ನೀರಿನ ವಿಚಾರದಲ್ಲಿ ತೊಂದರೆ ಆಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ವಿನಾಯಕ್, ಅಧೀಕ್ಷಕ ಅಭಿಯಂತರರಾದ ಚಂದ್ರಹಾಸ, ಕಾರ್ಯಪಾಲಕ ಅಭಿಯಂತರ ರವಿಚಂದ್ರ, ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!