ಬಿ ಎಸ್ ವೈ ಬಲಗೈ ಬಂಟ ಬಸವರಾಜ್ ಬೊಮ್ಮಾಯಿಗೆ ದಕ್ಕಿದ ರಾಜ್ಯದ 30 ನೇ ಸಿಎಂ ಪಟ್ಟ.

IMG-20210727-WA0021

 

ಬೆಂಗಳೂರು: ಬಿಎಸ್ ವೈ ರಾಜೀನಾಮೆ ನಂತರದಲ್ಲಿ ಮುಂದಿನ ಸಿಎಂ ಯಾರು ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿಸಿದ್ದ ವಿಚಾರಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ‌ ಆಯ್ಕೆಯಾಗಿದ್ದಾರೆ.

ಸಿಎಂ ರೇಸ್ ನಲ್ಲಿ ಪ್ರಹ್ಲಾದ ಜೋಷಿ, ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್, ಬಿ.ಎಲ್. ಸಂತೋಷ್, ಜಗದೀಶ್ ಶೆಟ್ಟರ್ ಸೇರಿದಂತೆ ಹಲವರ ಹೆಸರುಗಳಿದ್ದ ದೊಡ್ಡ ಪಟ್ಟಿಯೇ ಸಿದ್ದವಾಗಿತ್ತು, ಅವರೆಲ್ಲರನ್ನೂ ಬದಿಗೆ ಸರಿಸಿ ಈಗ ಬಿಎಸ್ ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗೃಹಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದ ಬಸವರಾಜ್ ಬೊಮ್ಮಾಯಿ ಹೆಸರೆ ಅಂತಿಮಗೊಂಡಿದ್ದು, ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಂಭವವಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಆರ್. ಬೊಮ್ಮಾಯಿ ಅವರ ಪುತ್ರರಾಗಿರುವ ಬಸವರಾಜ್ ಬೊಮ್ಮಾಯಿ‌ ಅವರು 1960ರ ಜನವರಿ 28ರಂದು ಜನಿಸಿದ್ದು, ಮೆಕ್ಯಾನಿಕಲ್ ಎಂಜಿನಿಯರ್ ಓದಿದ್ದಾರೆ. ಜನತಾದಳದಿಂದ ರಾಜಕೀಯ ಪ್ರವೇಶ ಮಾಡಿದ್ದ ಬೊಮ್ಮಾಯಿ‌ ಅವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. 2008ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದಿಂದ ಕಣಕ್ಕಿಳಿದು ಮೂರು ಬಾರಿ ಶಾಸಕರಾಗಿದ್ದರು.

ಬಸವರಾಜ್ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿ, ಪ್ರಸ್ತುತ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ, ಶಾಸನ ರಚನಾ ಸಚಿವ ಹಾಗೂ ಹಾವೇರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯ ನಿರ್ವಹಣೆ ಮಾಡಿರುವ ಅನುಭವ ಅವರಿಗಿದೆ.

ಒಟ್ಟಿನಲ್ಲಿ ರಾಜ್ಯಕ್ಕೆ ಉತ್ತರಾಧಿಕಾರಿ ಸಿಕ್ಕಂತಾಗಿದ್ದು, ಈಗ ಅವರ ಕಣ್ಮುಂದೆ ರಾಜ್ಯದ ಹಲವು ಸಮಸ್ಯೆಗಳಿದ್ದು, ಉಳಿದ ಶಾಸಕರನ್ನು ಎಷ್ಟರ ಮಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!