ಶ್ರೀ ಅನ್ನದಾನೇಶ್ವರ ಮಠದಲ್ಲಿ ಬಸವೇಶ್ವರ ಜಯಂತಿ ಹಾಗೂ ಮಹಿಳಾ ದಿನಾಚರಣೆ.

ದಾವಣಗೆರೆ  : ಮಕ್ಕಳಿಗೆ ಪ್ರತಿನಿತ್ಯ 12ನೇ ಶತಮಾನದ ಬಸವೇಶ್ವರರ ಹಾಗೂ ಇನ್ನಿತರ ಶರಣ ಶರಣೆಯರ ಒಂದೊಂದು ವಚನಗಳನ್ನು ತಿಳಿಸಿಕೊಟ್ಟರೆ ಮುಂದೆ ಅವರ ಜೀವನ ಸುಲಭವಾಗುತ್ತದೆ ಎಂದು ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಡಾ. ಜಸ್ಟಿನ್ ‘ಡಿ’ ಸೌಜಾ ಅವರು ಕರೆ ನೀಡಿದರು.


ಅವರು ದೇವರಾಜ ಅರಸು ಬಡಾವಣೆಯಲ್ಲಿರುವ ಹಾಲಕೆರೆ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಏರ್ಪಡಿಸಿದ್ದ 269ನೇ ಶಿವಾನುಭವ ಸಂಪದ, ಶ್ರೀ ಬಸವೇಶ್ವರ ಜಯಂತಿ ಹಾಗೂ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸಿನ ತಳಮಳ, ಕ್ರೌರ್ಯ ದೂರವಾಗುತ್ತದೆ ಎಂದರು.
ಕೋವಿಡ್ ನಂತರ ಮಕ್ಕಳ ಜೀವನ ಶೈಲಿಯೇ ಬದಲಾಗಿದೆ, ಗುರು-ಹಿರಿಯರಲ್ಲಿ ಭಕ್ತಿ ಇಲ್ಲ, ಪೋಷಕರಿಗೆ ಮಕ್ಕಳು ಬೆಲೆ ಕೊಡ್ತಾ ಇಲ್ಲ, ಪೋಷಕರು ಮತ್ತು ಮಕ್ಕಳು ಮೊಬೈಲ್ ದಾಸರಾಗಿದ್ದಾರೆ, ಬಂಧು- ಬಳಗದ ಸಂಪರ್ಕದಿಂದ ದೂರವಿರುತ್ತಾರೆ, ಪರಿಸ್ಥಿತಿ ಹೀಗೆ ಮುಂದುವರಿದರೆ ಪೋಷಕರು ದೊಡ್ಡ ದುರಂತವನ್ನು ಅನುಭವಿಸುತ್ತಾರೆ, ಈಗಲೇ ಎಚ್ಚೆತ್ತುಕೊಳ್ಳುವುದು ಅವಶ್ಯಕವೆಂದರು.


ಸಮಾಜದಲ್ಲಿ ಮಹಿಳೆಯರ ಪಾತ್ರ ಮುಖ್ಯ. ಆದರೆ ಇತ್ತೀಚೆಗೆ ಆಮಿಷಕ್ಕೆ ಒಳಗಾಗಿ ಪತಿ-ಪತ್ನಿಯರಲ್ಲಿ ಸೌಹಾರ್ದತೆ ಇಲ್ಲ. ಅತ್ತೆ ಅಜ್ಜಿ, ಅಕ್ಕ-ತಂಗಿಯರು ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕೆಂದರು.
ನಮ್ಮ ದೇಶದ ಸಂಸ್ಕೃತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಜನನೀಯರು ಮನೆಗೆ ಮೊದಲ ಗುರುವಾಗಿ ಮಕ್ಕಳಿಗೆ ಸಂಸ್ಕಾರದ ಬೀಜ ಬಿತ್ತುವುದರ ಮೂಲಕ ಒಳ್ಳೆಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ನಿವೃತ್ತ ಗ್ರಂಥ ಪಾಲಕಿ ಶ್ರೀಮತಿ ನಾಗರತ್ನ ಹೊಸಮನಿಯವರು ಕರೆ ನೀಡಿದರು.


ಮಹಿಳೆಯರು ಮೊಬೈಲ್ ಬಿಟ್ಟು ಓದುವ ಛಲವನ್ನು ಬೆಳೆಸಿಕೊಳ್ಳಬೇಕು, ಮನೆ ಕೆಲಸದ ಕಾಯಕತ್ವದಲ್ಲಿ ತೊಡಗಿ ದೇಶದ ಮತ್ತು ಕುಟುಂಬದ ಶಾಂತತೆಯನ್ನು ಕಾಪಾಡಬೇಕೆಂದು ನಿವೃತ್ತ ಶಿಕ್ಷಕಿ ಶ್ರೀಮತಿ ಸುನಂದ ಜಂಬನ ಗೌಡ್ರು ನುಡಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಸಂವಿಧಾನ ರೂಪಿಸಿದವರು. ಅವರ ವಚನಗಳನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟ. ಮಹಾತ್ಮರನ್ನು ನೆನೆಯುವುದರಿಂದ ಜೀವನ ಸುಂದರ ಸುಖಮಯವಾಗಿರುತ್ತದೆ, ಬಿದ್ದವರನ್ನು ಮೇಲೆತ್ತುವುದು ಬಸವಣ್ಣನವರ ಕಾಯಕವಾಗಿತ್ತು ಎಂದು ಸೋಮಸಮುದ್ರದ ಶ್ರೀ ಕೊಟ್ಟೂರು ಸ್ವಾಮಿ ಮಠದ ಶ್ರೀ ಸಿದ್ಧಲಿಂಗ ದೇವರು ಆಶೀರ್ವಚನದಲ್ಲಿ ನುಡಿದರು.
ಅಕ್ಕನ ಬಳಗದ ಅಧ್ಯಕ್ಷ ಶ್ರೀಮತಿ ಮಂಗಳ ವೀರಪ್ಪ ಭಾವಿ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ಶ್ರೀ ಪಂಚಾಕ್ಷರಿ ಸಂಗೀತ ವಿದ್ಯಾಲಯದ ಟಿ. ಹೆಚ್. ಎಂ. ಶಿವಕುಮಾರ ಸ್ವಾಮಿ ಪ್ರಾರ್ಥಿಸಿದರು. ನಂತರ ನಿವೃತ್ತ ಶಿಕ್ಷಕ ಮಹಾ ರುದ್ರಪ್ಪ ಮೆಣಸಿನಕಾಯಿ ಯವರು ಸ್ವಾಗತಿಸಿದರು. ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಹ ಶಿಕ್ಷಕಿ ಶ್ರೀಮತಿ ತನುಜ ವಿ.ಬಿ. ಕಾರ್ಯಕ್ರಮ ನಿರೂಪಿಸಿದರು. ಅಂತ್ಯದಲ್ಲಿ ಶಿಕ್ಷಕಿ ಶ್ರೀಮತಿ ಸುಜಾತ ವಂದಿಸಿದರು. ಶ್ರೀಮತಿ ಸಂಗಮ್ಮ ಅಡಿವೆಪ್ಪ, ಶ್ರೀಮತಿ ನೀಲಮ್ಮ ಮಾಂತೇಶ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!