ಬಿಬಿಎಂಪಿ ವಲಯದ ಗ್ರಂಥಾಲಯಗಳ ನಿರ್ವಹಣೆಗೆ ಅನುದಾನ ಬಿಡುಗಡೆಗೆ ಆದೇಶ – ಆಡಳಿತಾಧಿಕಾರಿ ರಾಕೇಶ್ ಸಿಂಗ್

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 5 ವಲಯಗಳಲ್ಲಿರುವ ಎಲ್ಲಾ ಪಾಲಿಕೆ ಗ್ರಂಥಾಲಯಗಳ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ಕೂಡಲೇ ಅನುದಾನ ಬಿಡುಗಡೆ ಮಾಡಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಆದೇಶಿಸಿದ್ದಾರೆ.
ಇಂದು ಪಾಲಿಕೆಯಲ್ಲಿ ನಡೆದ ಗ್ರಂಥಾಲಯ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಂಥಾಲಯಗಳಲ್ಲಿ ಅಗತ್ಯ ಕುಡಿಯುವ ನೀರಿನ ಸೌಕರ್ಯ, ಉತ್ತಮ ಗುಣಮಟ್ಟದ ಶೌಚಾಲಯ ಮತ್ತು ಗ್ರಂಥಾಲಯ ಕಟ್ಟಡಗಳ ದುರಸ್ತಿಯನ್ನು ಆದ್ಯತೆಯ ಮೇಲೆ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ನಗರ ಕೇಂದ್ರ ಗ್ರಂಥಾಲಯದಲ್ಲಿ 365 ಜನ ಗ್ರಂಥಪಾಲಕರು ಗುತ್ತಿಗೆ ಆಧಾರದ ಮೇಲೆ ಕೆಲಸಮಾಡುತ್ತಿದ್ದು ಅವರ ಗೌರವ ಧನವನ್ನು ಹೆಚ್ಚಿಸಲಾಗುವುದು, ಗ್ರಂಥಾಲಯಗಳ ನಿರ್ವಹಣೆಗೆ ಈಗಾಗಲೇ ಸಂಗ್ರಹಿಸಿರುವ ತೆರಿಗೆಯ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ರಾಕೇಶ್ ಸಿಂಗ್ ತಿಳಿಸಿದರು.
ಪಾಲಿಕೆ ಗ್ರಂಥಾಲಯಗಳ ಉತ್ತಮ ದರ್ಜೆಯ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ 10 ಅಧಿಕಾರಿಗಳನ್ನು ಅಧ್ಯಯನ ಪ್ರವಾಸಕ್ಕಾಗಿ ಕಳಿಸಿಕೊಡಲು ಸಹಾ ಈ ಮಹತ್ವದ ಸಭೆಯಲ್ಲಿ ನಿರ್ಣಯಿಸಲಾಯಿತು.