ಬೀರಲಿಂಗೇಶ್ವರ ದೇವಾಲಯ ಪುಣ್ಯಕ್ಷೇತ್ರವಾಗುವುದರಲ್ಲಿ ಅನುಮಾನವಿಲ್ಲ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಾಳೆ ಲೋಕಾರ್ಪಣೆಗೊಳ್ಳುತ್ತಿರುವ ಶ್ರೀ ಬೀರಲಿಂಗೇಶ್ವರ ದೇವಾಲಯ ಮುಂದಿನ ದಿನಗಳಲ್ಲಿ ಪುಣ್ಯ ಕ್ಷೇತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಸಂಜೆ ನೂತನ ಶ್ರೀ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ದಾನಿಗಳಿಗೆ ಶ್ರೀಗಳಿಂದ ಗುರುರಕ್ಷೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ಹಲವು ವರ್ಷಗಳ ಹಿಂದೆ ಸಮಾಜದ ಯುವಕರು ಬೀರಪ್ಪನ ದೇವಾಲಯ ನಿರ್ಮಾಣ ಮಾಡುವ ಇಂಗಿತ ವ್ಯಕ್ತಪಡಿಸಿ ತಮ್ಮ ಬಳಿ ಬಂದಾಗ ಈ ಜಾಗದಲ್ಲಿ ಅದ್ಹೇಗೆ ದೇವಾಲಯ ನಿರ್ಮಾಣ ಮಾಡುತ್ತೀರಿ ಎಂದು ಕೇಳಿದ್ದೆ. ಹೇಗಾದರೂ ಸರಿ ದೇವಾಲಯ ನಿರ್ಮಾಣ ಮಾಡುತ್ತೇವೆ ಎಂದು ಪಣತೊಟ್ಟ ಯುವಕರು ಇಂದು ದೇವಾಲಯದ ನಿರ್ಮಾಣ ಮಾಡಿ ತೋರಿಸಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಯಾರೊಬ್ಬರೂ ತಮ್ಮ ಹೆಸರನ್ನು ಹೇಳಿಕೊಳ್ಳುತ್ತಿಲ್ಲ. ಬೀರಪ್ಪನ ಗುಡಿ ನೆಪದಲ್ಲಿ ಪಕ್ಷಬೇಧ ಮರೆತು ಎಲ್ಲ ಯುವಕರೂ ಒಂದೆಡೆ ಸೇರಿರುವುದು. ಆ ಮೂಲಕ ಸಮಾಜ ಬಲಿಷ್ಠವಾಗಿ ಸಂಘಟನೆ ಆಗಲಿದೆ. ಇದಕ್ಕೆ ಕಾರಣರಾದ ಯುವ ಸಮೂಹದ ಕಾರ್ಯ ಅಭಿನಂದನೀಯ ಎಂದರು.
ಏನೂ ಮಾಡಲಾಗುವುದಿಲ್ಲ ಎಂದುಕೊಂಡಿದ್ದ ಜಾಗದಲ್ಲಿ ಸುಂದರ ದೇವಾಲಯ, ಪುಷ್ಕರಣಿ, ಕನಕಮಂಟಪ, ಬಯಲು ಉದ್ಭವ ಲಿಂಗ ಸ್ಥಾಪಿಸಿ, ಇದೊಂದು ಪ್ರವಾಸಿ ತಾಣದಂತೆ ರೂಪಿಸಿದ್ದಾರೆ. ಇಂದು ದೇವಾಲಯದ ಆವರಣಕ್ಕೆ 9 ದೇವರ ಪಲ್ಲಕ್ಕಿಗಳು ಆಗಮಿಸಿವೆ. ಮುಂದಿನ ದಿನಗಳಲ್ಲಿ ಇಲ್ಲಿ ನೂರಾರು ಪಲ್ಲಕ್ಕಿಗಳು ಆಗಮಿಸಿ ಜಾತ್ರೆಯೇ ನಡೆಯುತ್ತದೆ. ಇದೊಂದು ಪವಿತ್ರ ಕ್ಷೇತ್ರವಾಗುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ತಮ್ಮ ಸಹಕಾರ ಇದ್ದೇ ಇದೆ ಎಂದರು.
ಕಾಗಿನೆಲೆ ಕನಕಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ, ಹಾಲುಮತ ಸಮಾಜದಲ್ಲಿ ಒಕ್ಕಲಿಗೊಬ್ಬ ಬೀರಪ್ಪನಿದ್ದಾನೆ. ಆದರೆ, ಈ ಬೀರಪ್ಪನಿಗೆ ಯಾವುದೇ ಒಕ್ಕಲು ಇಲ್ಲ. ಎಲ್ಲ ಒಕ್ಕಲಿನವರಿಗೂ ಈ ದೇವರು ಮನೆದೇವರಾಲಿ ಎಂದರು.
ಯಾವುದೇ ಬೀರಪ್ಪ ದೇವರನ್ನು ಶಿಲ್ಪಿಗಳು ಕೆತ್ತನೆ ಮಾಡಿಲ್ಲ. ಹಾಗೆಯೇ ಬೀರಪ್ಪದೇವರು ಬಯಲಿನಲ್ಲಿರುತ್ತಾನೆ. ಈ ದೇವಾಲಯದಲ್ಲಿ ಪುಷ್ಕರಣಿ, ಬಯಲು ಲಿಂಗ ಇರುವುದು ವಿಶೇಷ. ಮುಂದಿನ ದಿನಗಳಲ್ಲಿ ದೇವಾಲಯ ನೊಂದು ಬಂದವರಿಗೆ ಸಾಂತ್ವನ ಸಿಗುವಂತಹ ಪುಣ್ಯ ಕ್ಷೇತ್ರವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಇ.ಕಾಂತೇಶ್ ಮಾತನಾಡಿದರು.
ಇತಿಹಾಸ ತಜ್ಞ ಲಿಂಗದಳ್ಳಿ ಹಾಲಪ್ಪ ವಿಶೇಷ ಉಪನ್ಯಾಸ ನೀಡಿ, ಹಾಲುಮತ ಸಮುದಾಯದ ಧಾರ್ಮಿಕ, ಚಾರಿತ್ರಿಕ ಇತಿಹಾಸದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದರಲ್ಲದೆ, ಕುರುಬ ಸಮುದಾಯದವರು ‘ನಾನು ಕುರುಬ’ ಎಂದು ಹೇಳಿಕೊಳ್ಳಲು ಹಿಂಜರಿಕೆ ಬೇಡ ಎಂದರು.
ನಂತರ ದೇವಾಲಯ ನಿರ್ಮಾಣಕ್ಕೆ ಉದಾರವಾಗಿ ದಾನ ನೀಡಿದ 300ಕ್ಕೂ ಹೆಚ್ಚು ದಾನಿಗಳಿಗೆ ಶ್ರೀಗಳು ಗುರುರಕ್ಷೆ ನೀಡಿ, ಆಶೀರ್ವದಿಸಿದರು.
ವೇದಿಕೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಆಶಾ ಚಂದ್ರಪ್ಪ, ರೇಖಾರಂಗನಾಥ್, ಮೋಹನ್, ಮಾಜಿ ಎಪಿಎಂಸಿ ಅಧ್ಯಕ್ಷ ಮಹೇಶ್, ಪ್ರಮುಖರಾದ ಸಿ.ಹೆಚ್. ಮಾಲತೇಶ್, ಹೆಚ್. ಫಾಲಾಕ್ಷಿ, ಡಿ. ಸೋಮಸುಂದರ್, ರಾಮಕೃಷ್ಣ ಮೂಡ್ಲಿ, ನವುಲೆ ಈಶ್ವರಪ್ಪ, ಸಿ.ಹೊನ್ನಪ್ಪ, ಚನ್ನಪ್ಪ ಸೇರಿದಂತೆ ಹಲವರಿದ್ದರು.
ನಾಳಿನ ಕಾರ್ಯಕ್ರಮಗಳು:
ಬೆಳಿಗ್ಗೆ 6.30ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ರುದ್ರಾಭಿಷೇಕ, 108 ಕಳಶ ಕುಂಭದೊಂದಿಗೆ ವಿಗ್ರಹ ಪ್ರತಿಷ್ಠಾಪನೆ, ಪೂರ್ಣಾಹುತಿ, ನೇತ್ರೋನ್ಮಿಲನ ಕದಳಿ ಫಲ ವೃಕ್ಷ ಛೇದನ, ಪುಷ್ಪಾಲಂಕಾರ ಮತ್ತು ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.
ಬೆಳಿಗ್ಗೆ 11.30ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಶ್ರೀಕ್ಷೇತ್ರ ಕಾಗಿನೆಲೆ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಕೃಪಾಶೀರ್ವಾದೊಂದಿಗೆ ಶ್ರೀಕ್ಷೇತ್ರ ಕಾಗಿನೆಲೆ ಹೊಸದುರ್ಗ ಶಾಖಾಮಠದ ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಹೊಸದುರ್ಗ ಶ್ರೀಕ್ಷೇತ್ರ ಭಗೀರಥಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಹಾಗೂ ಬಸವಕೇಂದ್ರದ ಚರಮೂರ್ತಿಗಳಾದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಸಂಸದ ಶ್ರೀ ಬಿ.ವೈ. ರಾಘವೇಂದ್ರ ಉಪಸ್ಥಿತರಿರಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ ಆರ್. ಪ್ರಸನ್ನಕುಮಾರ್, ಶ್ರೀ ಆಯನೂರು ಮಂಜುನಾಥ್, ಶ್ರೀ ಎಸ್. ರುದ್ರೇಗೌಡ, ಮಾಜಿ ಶಾಸಕ ಶ್ರೀ ವರ್ತೂರ್ ಪ್ರಕಾಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಎಂ. ಶ್ರೀಕಾಂತ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀ ಪಿ. ಮೈಲಾರಪ್ಪ, ಜಿಲ್ಲಾ ಪಂಚಾಯ್ತಿ – ತಾಲ್ಲೂಕು ಪಂಚಾಯ್ತಿ, ಮಹಾನಗರ ಪಾಲಿಕೆ, ಎಪಿಎಂಸಿಯ ಮಾಜಿ ಮತ್ತು ಹಾಲಿ ಸದಸ್ಯರುಗಳು, ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಮತ್ತು ಹಾಲಿ ನಿರ್ದೇಶಕರುಗಳು, ಶಿವಮೊಗ್ಗ ನಗರದ ಎಲ್ಲ ಕುರುಬ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.